ಕರ್ನಾಟಕ

karnataka

ETV Bharat / state

Rain in Bengaluru ರಾಜ್ಯದಲ್ಲಿ ತಡವಾಗಿ ಮುಂಗಾರು ಚುರುಕು: ಸಿಲಿಕಾನ್ ಸಿಟಿಯಲ್ಲಿ ಮುಂದಿನ ಮೂರು ದಿನ ಮಳೆ - ಹವಾಮಾನ ಇಲಾಖೆ ಮುನ್ಸೂಚನೆ

ಭಾನುವಾರ ರಾತ್ರಿಯಾಗುತ್ತಲೇ ಮಳೆ ಶುರುವಾಗಿದ್ದು, ಬೆಂಗಳೂರಿನಲ್ಲಿ ಎಂದಿನಂತೆ ದ್ವಿಚಕ್ರ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅರ್ಧ ಗಂಟೆ ಕಾಲ ಗಾಳಿ ಸಹಿತ ಮಳೆಯಾಗಿದೆ. ಮನೆಗಳತ್ತ ತೆರಳಲು ಜನರು ರಸ್ತೆಯಲ್ಲಿ ನೀರು ನಿಂತು ಟ್ರಾಫಿಕ್ ಸಮಸ್ಯೆಯಾಗಿದ್ದರಿಂದ ಪರದಾಡಿದರು.

Heavy rain with wind for half an hour in Silicon City
ಸಿಲಿಕಾನ್ ಸಿಟಿಯಲ್ಲಿ ಅರ್ಧ ಗಂಟೆಗಳ ಕಾಲ ಗಾಳಿ ಸಹಿತ ಜಡಿ ಮಳೆ

By

Published : Jun 25, 2023, 10:16 PM IST

ಬೆಂಗಳೂರು: ರಾಜ್ಯದಲ್ಲಿ ತಡವಾಗಿ ಮುಂಗಾರು ಚುರುಕುಗೊಂಡಿದೆ. ಇದರ ಪರಿಣಾಮವಾಗಿ ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾನುವಾರ ರಾತ್ರಿಯಾಗುತ್ತಲೇ ಮಳೆ ಆರಂಭವಾಗಿದ್ದು, ಎಂದಿನಂತೆ ದ್ವಿಚಕ್ರ ವಾಹನ ಸವಾರರ ಪರದಾಟ ಕಂಡುಬಂತು. ಅರ್ಧ ಗಂಟೆ ಕಾಲ ಗಾಳಿ ಸಹಿತ ಜಡಿ ಮಳೆಯಾಗಿದೆ. ಮನೆಗಳತ್ತ ತೆರಳಲು ಜನರು ರಸ್ತೆಯಲ್ಲಿ ನೀರು ಹಾಗೂ ಟ್ರಾಫಿಕ್ ಸಮಸ್ಯೆಗಳಿಂದ ಪರದಾಡಿದರು. ಅಲ್ಲದೇ ಕೆಲವೆಡೆ ಮಳೆ ನಿಂತ ಮೇಲೆ ತೆರಳಲು ಜನರು ಅಲ್ಲಲ್ಲಿ ಆಶ್ರಯ ಪಡೆದರು.

ಟೌನ್‌ಹಾಲ್, ಶಾಂತಿನಗರ, ಶೇಷಾದ್ರಿಪುರ, ವಿಲ್ಲನ್‌ಗಾರ್ಡನ್, ಮಲ್ಲೇಶ್ವರ, ರಾಜಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ವೀಕೆಂಡ್ ಮಸ್ತಿ ಮುಗಿಸಿ ಮನೆಗೆ ವಾಪಸ್​ ಹೊರಟಿದ್ದ ಜನರು ಮಳೆ ಕಿರಿಕಿರಿ ಅನುಭವಿಸುವಂತಾಗಿದೆ. ಕೆಲವೆಡೆ ಇನ್ನೂ ಮೋಡ ಕವಿದ ವಾತಾವರಣ ಇದ್ದು, ಶೀತಮಯ ಗಾಳಿ ಕೂಡ ಬೀಸುತ್ತಿದೆ.

28ರ ವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ:ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿಗಿಂತ ಕರಾವಳಿಯಲ್ಲಿ ಮುಂಗಾರು ಇನ್ನಷ್ಟು ಬಿರುಸುಗೊಂಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೂನ್ 28ರ ವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಬೀದರ್, ಕಲಬುರಗಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜೂನ್ 27 ರಿಂದ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ನೀಡಿದೆ. ರಾಜ್ಯದಲ್ಲಿ ವಾಡಿಕೆಗಿಂತ ತಡವಾಗಿ ಆಗಮಿಸಿರುವ ಮುಂಗಾರು ಜೂನ್ 18ರ ವರೆಗೆ ದುರ್ಬಲಗೊಂಡಿತ್ತು. ಇದರಿಂದಾಗಿ ಪ್ರಸಕ್ತ ತಿಂಗಳಲ್ಲಿ ಹೇಳಿಕೊಳುವಷ್ಟೂ ಮಳೆ ಬಿದ್ದಿಲ್ಲ. ಕೆಲವೆಡೆ ಮಾತ್ರ ಒಂದೆರೆಡು ದಿನಗಳು ಜೋರಾಗಿ ಬಿದ್ದರೆ, ಉಳಿದ ಭಾಗಗಳಲ್ಲಿ ಸಾಧಾರಣ ಮಳೆಯಾಗಿತ್ತು. ಈಗ ಮುಂಗಾರು ಇನ್ನಷ್ಟು ಚುರುಕುಗೊಂಡಿದ್ದರಿಂದ ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬಿಪೊರ್‌ಜಾಯ್ ಚಂಡಮಾರುತವು ತೇವಾಂಶಭರಿತ ಮೋಡಗಳನ್ನು ಸೆಳೆದುಕೊಂಡಿದ್ದು, ದುರ್ಬಲಗೊಂಡಿದ್ದ ಮುಂಗಾರು ಮಾರುತಗಳು ಈಗ ರಾಜ್ಯಾದ್ಯಂತ ಆವರಿಸುತ್ತಿವೆ. ಕಳೆದ ಎರಡು ದಿನಗಳಿಂದ ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಾರುತಗಳು ತುಸು ಪ್ರಬಲಗೊಂಡಿದ್ದು, ಮೋಡ ಕವಿದ ವಾತಾವರಣದೊಂದಿಗೆ ಅಗಾಗ್ಗೆ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಮುಂಗಾರು ಇನ್ನಷ್ಟು ಮುನ್ನಡೆಯಲು ಪೂರಕ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಉತ್ತರ ಒಳನಾಡಿಗೂ ಮಾರುತಗಳು ಪ್ರವೇಶಿಸಿವೆ.

ಕೊಡಗಿಗೆ ಎನ್​ಡಿಆರ್​ಎಫ್​ ಆಗಮನ : ಕೊಡಗು ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಅಪಾರ ಮಳೆಯಿಂದಾದ ಅನಾಹುತಗಳು ಒಂದೆರಡಲ್ಲ. ಭಾರಿ ಭೂ ಕುಸಿತ, ಪ್ರವಾಹದಿಂದಾಗಿ 20ಕ್ಕೂ ಅಧಿಕ ಜೀವ ನಷ್ಟವಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿ ನಾಮಾವಶೇಷವಾಗಿದೆ. 1,000ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿವೆ. ಇದೀಗ ಮತ್ತೆ ಮಳೆಗಾಲ ಎದುರಾಗಿರುವುದರಿಂದ ಸಂಭಾವ್ಯ ಅಪಾಯ ಎದುರಿಸಲು ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು, ಎನ್​ಡಿಆರ್​ಎಫ್ ತಂಡ ಜೂನ್​ 21ರಂದೇ ಜಿಲ್ಲೆಗೆ ಆಗಮಿಸಿದೆ.

ಇದನ್ನೂಓದಿ:Monsoon rain: ಕರಾವಳಿ ಭಾಗದಲ್ಲಿ ಮುಂದಿನ ಐದು ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ABOUT THE AUTHOR

...view details