ಕರ್ನಾಟಕ

karnataka

ETV Bharat / state

ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್​​ಟಾಪ್ ಇಲ್ಲ: ಅಶ್ವತ್ಥ್​​​ ನಾರಾಯಣ - Dr. Ashwath Narayan assembly news

ಮುಂದಿನ ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್​​ಟಾಪ್ ನೀಡುವ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.

Dr. Ashwath Narayan
ಡಾ.ಅಶ್ವಥ್ ನಾರಾಯಣ

By

Published : Mar 19, 2020, 9:19 PM IST

ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​​​​ ನೀಡುವ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಳಿಸಲಾಗುವುದು. 2019-20ನೇ ಸಾಲಿನಲ್ಲಿ ಎಲ್ಲಾ ಪದವಿ ವಿದ್ಯಾರ್ಥಿಗಳಿಗೂ ಲ್ಯಾಪ್‍ಟಾಪ್ ನೀಡಲಾಗುವುದು. ಆದರೆ ಮುಂದಿನ ವರ್ಷದಿಂದ ಇದನ್ನು ಕೈಬಿಡಲಾಗುತ್ತದೆ ಎಂದು ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್​ ನಾರಾಯಣ ವಿಧಾನಸಭೆಯಲ್ಲಿ ಹೇಳಿದರು.

ವಿಧಾನಸಭೆ ಕಲಾಪ

ಇಂದು ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಮಹಂತೇಶ್ ದೊಡ್ಡಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಇದು ಹಿಂದಿನ ಸರ್ಕಾರದ ಯೋಜನೆ. 2017-18ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೆ ತಂದರು. ಬಳಿಕ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಇದನ್ನು ಮುಂದುವರೆಸಿದರು. ಆದರೆ ಇದು ಆರ್ಥಿಕವಾಗಿ ದುಬಾರಿಯಾಗಿದೆ. ರಾಜ್ಯದ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲಾ ಜಾತಿಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆರಂಭದಲ್ಲಿ 96 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆ ಪಟ್ಟಿ ಪರಿಷ್ಕರಣೆ ಮಾಡಿ ಒಟ್ಟು 1.9 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡಲಾಗುತ್ತಿದೆ. ಇದಕ್ಕೆ 311 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ 400ಕ್ಕೂ ಹೆಚ್ಚು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ಸರ್ಕಾರಿ ಕಾಲೇಜುಗಳು ನ್ಯಾಕ್ ಸಮಿತಿಯ ಮಾನ್ಯತೆ ಪಡೆದಿಲ್ಲ. ಹೀಗಿರುವಾಗ 311 ಕೋಟಿ ರೂ. ದುಬಾರಿ ವೆಚ್ಚ ಮಾಡಿ ಲ್ಯಾಪ್‍ಟಾಪ್ ನೀಡುವ ಕುರಿತು ಚಿಂತಿಸಬೇಕಾಗಿದೆ ಎಂದರು.

ನಾವು ಕಾಲೇಜುಗಳ ಮೂಲ ಸೌಲಭ್ಯ ಹೆಚ್ಚಳಕ್ಕೆ ಆದ್ಯತೆ ನೀಡುತ್ತೇವೆ. 2019-20ನೇ ಸಾಲಿಗೆ ಲ್ಯಾಪ್‌ಟಾಪ್ ಕೊಡುವ ಕುರಿತು ಹಿಂದಿನ ಸರ್ಕಾರ ನಿರ್ಧಾರ ತೆಗೆದುಕೊಂಡು ಟ್ಯಾಪ್ ಸಮಿತಿ ಮತ್ತು ಹಣಕಾಸು ಇಲಾಖೆಯ ನಿರ್ಧಾರದಂತೆ ಟೆಂಡರ್ ಕರೆದು ಗುತ್ತಿಗೆ ಕೂಡ ನೀಡಲಾಗಿದೆ. ಆ ಪೈಕಿ ಈ ವರ್ಷ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲರಿಗೂ ಲ್ಯಾಪ್‍ಟಾಪ್ ಕೊಡುತ್ತೇವೆ. ಮುಂದಿನ ವರ್ಷ ಈ ಯೋಜನೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ತಿಳಿಸಿದರು.

2ನೇ ಮತ್ತು 3ನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಪ್ರಥಮ ವರ್ಷಕ್ಕೆ ವಿದ್ಯಾರ್ಥಿಗಳು ಪ್ರವೇಶ ಪಡೆದ ಬಳಿಕ ಮೂರು ವರ್ಷ ಕಾಲೇಜಿನಲ್ಲಿರುತ್ತಾರೆ ಎಂಬ ಕಾರಣಕ್ಕಾಗಿ ಲ್ಯಾಪ್‌ಟಾಪ್ ನೀಡುವ ನಿರ್ಧಾರ ಮಾಡಲಾಗಿತ್ತು ಎಂದು ಸಚಿವರು ಹೇಳಿದರು.

ABOUT THE AUTHOR

...view details