ಕರ್ನಾಟಕ

karnataka

By

Published : Jun 8, 2019, 5:45 PM IST

ETV Bharat / state

ಒಡಂಬಡಿಕೆ ಪ್ರಕಾರ ಜಿಂದಾಲ್​ಗೆ ಭೂಮಿ ಮಂಜೂರು: ಸಚಿವ ಕೃಷ್ಣಭೈರೇಗೌಡ

ಒಡಂಬಡಿಕೆ ಪ್ರಕಾರ ಜಿಂದಾಲ್​ಗೆ ಭೂಮಿ ಮಂಜೂರು ಮಾಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಸಚಿವ ಕೃಷ್ಣಭೈರೇಗೌಡ

ಬೆಂಗಳೂರು:ಒಡಂಬಡಿಕೆ ಪ್ರಕಾರ ಭೂಮಿ ಮಂಜೂರು ಮಾಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಜಿಂದಾಲ್​ಗೆ ಭೂಮಿಯ ದರ ನಿಗದಿ ಮಾಡಿದವರು ಯಾರು? ಆಗಿನ ಬಿಜೆಪಿ ಸರ್ಕಾರವೇ ದರ ನಿಗದಿ ಮಾಡಿತ್ತು. ಈಗ ಅವರು ಧ್ವನಿ ಎತ್ತುತ್ತಿರುವುದು ಸರಿಯಲ್ಲ ಎಂದು ಕೃಷ್ಣಭೈರೇಗೌಡ ಹೇಳಿದ್ದಾರೆ. ಜಿಂದಾಲ್​ಗೆ ಭೂಮಿ ನೀಡುವಾಗ ಹತ್ತು ವರ್ಷಗಳಿಗೆ ಲೀಸ್ ಕಂ ಸೇಲ್ ಡೀಡ್ ಎಂದು ಮಾಡಲಾಗಿತ್ತು. ಹಾಗಾಗಿ, ಈಗ ಹತ್ತು ವರ್ಷ ಮುಗಿದಿರುವುದರಿಂದ ಕ್ರಯ ಮಾಡಲು ಒಪ್ಪಿಗೆ ನೀಡಲಾಗಿದೆ. ದರವನ್ನೂ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೃಷ್ಣಭೈರೇಗೌಡ, ಸಚಿವ

ಜಿಂದಾಲ್ ಕಂಪನಿ ಪರವಾಗಿ ಮಾತನಾಡುತ್ತಿಲ್ಲ.ತಪ್ಪು ಸಂದೇಶ ಹೋಗಬಾರದೆಂದು ಹೇಳುತ್ತಿದ್ದೇನೆ. ಬಿಜೆಪಿ ಸರ್ಕಾರವಿದ್ದಾಗಲೇ ಅವರಿಗೆ ಭೂಮಿಯನ್ನು ನೀಡಲಾಗಿತ್ತು. 2006-07ರಲ್ಲೇ ಸರ್ಕಾರಿ ಆದೇಶವಾಗಿದೆ. ಹಣವನ್ನೂ ಕಟ್ಟಿಸಿಕೊಂಡಿದ್ದಾರೆ. ಹಗರಣ ಆಗಿದ್ದರೆ ಬಿಜೆಪಿ ಸರ್ಕಾರದಲ್ಲೇ ಆಗಿರಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಜಿಂದಾಲ್ ಒಳ್ಳೆಯ ಕಂಪನಿ 16 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಅವರು ಈಗಾಗಲೇ ಉಕ್ಕಿನ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಕಾರ್ಮಿಕರಿಗೆ ವಸತಿ, ಪವರ್ ಪ್ಲಾಂಟ್ ಮತ್ತಿತರ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಬ್ರಾಹ್ಮಣಿ ಸ್ಟೀಲ್ ಬಂತು. ಆ ಕಂಪನಿ ಒಂದು ಕೆಜಿ ಸ್ಟೀಲ್ ಬಂತಾ? ಎಂದು ಪ್ರಶ್ನಿಸಿದ ಅವರು, ಜಿಂದಾಲ್ ಸುಮಾರು 20 ಲಕ್ಷ ಟನ್ ಸ್ಟೀಲ್ ತಯಾರು ಮಾಡುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಜಿಂದಾಲ್ ಕಂಪನಿಗೆ ಸುಮಾರು 3,660 ಎಕರೆ ಭೂಮಿ ಮಂಜೂರು ಮಾಡುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮೈತ್ರಿ ಸರ್ಕಾರದ ಸಚಿವರು ಹಾಗೂ ಉಭಯ ಪಕ್ಷಗಳ ನಾಯಕರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಬಿಜೆಪಿ ಪ್ರತಿಭಟನೆ ನಡೆಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಪ್ರತಿಭಟನೆಗೆ ಅವಕಾಶ ಕೊಡದಂತೆ ಜಿಂದಾಲ್ ಕಂಪನಿಗೆ ಭೂಮಿ ನೀಡುವ ನಿರ್ಧಾರ ಹಿಂಪಡೆಯಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಬಹಿರಂಗವಾಗಿಯೇ ಮೈತ್ರಿ ಸರ್ಕಾರ ಕೈಗೊಂಡಿರುವ ನಿರ್ಧಾರದ ವಿರುದ್ಧ ಸಮರ ಸಾರಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ ಎರಡು ಪತ್ರ ಬರೆಯುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಪ್ರಕಟಿಸಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದರು. ಹಿಂದಿನ ಕಾಂಗ್ರೆಸ್ ಸರ್ಕಾರ ಕೈಗಾರಿಕೆಗಳಿಗೆ ಭೂಮಿ ಪರಭಾರೆ ಮಾಡಬಾರದು, ಹತ್ತು ವರ್ಷ ಮಾತ್ರ ಗುತ್ತಿಗೆ ನೀಡಬೇಕು. ಒಂದು ವೇಳೆ ಭೂಮಿ ಕೊಡಲೇಬೇಕೆಂದರೆ ಹತ್ತು ಎಕರೆಗಿಂತ ಜಾಸ್ತಿ ನೀಡಬಾರದೆಂಬ ಕಾನೂನು ಮಾಡಿಕೊಂಡಿತ್ತು. ಸರ್ಕಾರದ ಕಾನೂನನ್ನು ಮುರಿಯುವುದು ಸರಿಯಲ್ಲವೆಂದು ಸಿಎಂಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ ಕೆಲ ಸಚಿವರು ಭೂಮಿ ನೀಡುವ ನಿರ್ಧಾರವನ್ನು ವಿರೋಧಿಸಿದ್ದರು. ಕೆಲವರು ಪ್ರತ್ಯೇಕವಾಗಿ ಸಿಎಂ ಅವರನ್ನು ಭೇಟಿ ಮಾಡಿ ಆದೇಶ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಎಂ ಗೊಂದಲದಲ್ಲಿ ಸಿಲುಕಿದ್ದು, ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕಾದುನೋಡಬೇಕಿದೆ.ಯಾವುದೇ ಕಾರಣಕ್ಕೂ ಜಿಂದಾಲ್​ಗೆ ಭೂಮಿ ಕೊಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಳೆದ ಕೆಲವು ದಿನಗಳಿಂದ ಸರ್ಕಾರವನ್ನು ಆಗ್ರಹಿಸುತ್ತಿದ್ದು, ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details