ಬೆಂಗಳೂರು:ಇತ್ತೀಚೆಗೆ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು. ಇದಕ್ಕೆ ರೈತಪರ ಹೋರಾಟಗಾರ ಕುರುಬೂರು ಶಾಂತಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆ ತಿದ್ದುಪಡಿ ಉದ್ದಿಮೆಗಳ ಸಂತೃಪ್ತಿಗೆ ಮಾತ್ರ ಸೀಮಿತವಾಗಿದೆ. ಇದರಿಂದ ಕೃಷಿ ವಲಯ ಮತ್ತಷ್ಟು ದುರ್ಬಲವಾಗಿದೆ ಎಂದು ಕಿಡಿಕಾರಿದ್ದಾರೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಉದ್ಯಮಿಗಳ ಸಂತೃಪ್ತಿಗೆ ಮಾತ್ರ ಸೀಮಿತ: ಕುರುಬೂರು ಆಕ್ರೋಶ - Kurubur Shantakumar
ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದನ್ನು ಸರ್ಕಾರ ವಾಪಸ್ ಪಡೆಯಬೇಕು. ಇದರಿಂದ ರೈತರಿಗೆ ಯಾವುದೇ ಉಪಯೋಗವಾಗುವುದಿಲ್ಲ. ಇದು ಉದ್ಯಮಿಗಳ ಪರವಾಗಿದೆ. ಹಾಗಾಗಿ ಕಾಯ್ದೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರೈತರು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
![ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಉದ್ಯಮಿಗಳ ಸಂತೃಪ್ತಿಗೆ ಮಾತ್ರ ಸೀಮಿತ: ಕುರುಬೂರು ಆಕ್ರೋಶ Land Improvement Act Amendment Only Limited to Satisfaction of Enterprises: Kurubur Shantakumar](https://etvbharatimages.akamaized.net/etvbharat/prod-images/768-512-7156841-thumbnail-3x2-news.jpg)
ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ 79 A ಕಾಯ್ದೆ ರದ್ದು ಮಾಡಿ ಕೃಷಿ ಭೂಮಿಯನ್ನು ಯಾವುದೇ ಕೈಗಾರಿಕೆ ಉದ್ಯಮಿಗಳು ರೈತರಿಂದ ನೇರವಾಗಿ ಖರೀದಿಸಬಹುದು ಎಂಬ ಆದೇಶ ಹೊರಡಿಸಿರುವುದು ರೈತ ವಿರೋಧಿ ನೀತಿಯಾಗಿದೆ. ಈಗಾಗಲೇ ದೊಡ್ಡ ದೊಡ್ಡ ನಗರಗಳ ಸುತ್ತ ಫಲವತ್ತಾದ ಕೃಷಿ ಭೂಮಿಯನ್ನು ಖರೀದಿಸಿ ಪಾಳು ಬಿಟ್ಟು ರಿಯಲ್ ಎಸ್ಟೇಟ್ ಭೂ ಮಾಫಿಯಾದವರು ಹಾಗೂ ಕೈಗಾರಿಕೆ ಉದ್ಯಮಿಗಳು ಕೃಷಿ ಕ್ಷೇತ್ರವನ್ನು ದುರ್ಬಲಗೊಳಿಸಿದ್ದಾರೆ.
ಕಾಯ್ದೆ ತಿದ್ದುಪಡಿ ಮಾಡಿ ಹೊಸ ಕಾಯ್ದೆ ಜಾರಿಗೆ ತರುವುದರಿಂದ ಮತ್ತಷ್ಟು ಕೃಷಿ ಭೂಮಿಯನ್ನು ರೈತರಿಗೆ ಬಂಡವಾಳಶಾಹಿಗಳು ಮೋಸ ಮಾಡಿ ಖರೀದಿಸಲು ಹೆಚ್ಚಿನ ಅವಕಾಶ ಸಿಕ್ಕಂತಾಗುತ್ತದೆ. ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸಲು, ಉದ್ಯಮಿಗಳನ್ನು ಸಂತೃಪ್ತಿಗೊಳಿಸಲು ಈ ಕಾಯ್ದೆ ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರೈತರು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.