ಬೆಂಗಳೂರು: ವೈಟ್ಫೀಲ್ಡ್ನ ಸಾದರಮಂಗಲ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ವತಿಯಿಂದ ಹಂಚಿಕೆ ಮಾಡಲಾದ ಭೂಮಿಯಲ್ಲಿ ಅವ್ಯವಹಾರವನ್ನು ಅಪರ ಮುಖ್ಯ ಕಾರ್ಯದರ್ಶಿಯಿಂದ ತನಿಖೆ ನಡೆಸುವುದಾಗಿ ಬೃಹತ್ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಕಾನ್‌ಕಾರ್ಡ್ ವಿವಾದ: ವಿಧಾನ ಪರಿಷತ್ನಲ್ಲಿನ ಪ್ರಶ್ನೋತ್ತರದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರ ಪ್ರಶ್ನೆಗೆ ಉತ್ತರಿಸಿದ ಅವರು, ಕಾನ್‌ಕಾರ್ಡ್ ಸಂಸ್ಥೆಗೆ 2007ರಲ್ಲಿ ಭೂಮಿ ಹಂಚಿಕೆ ಮಾಡಲಾಗಿದೆ. ಹೆಸರು ಬದಲಾದ ಎಂಬೆಸಿ ಮತ್ತು ಕಾನ್‌ಕಾರ್ಡ್ ಎಂಬ ಎರಡು ಕಂಪನಿಗಳು ಸಹೋದರ ಸಂಸ್ಥೆಗಳಾಗಿವೆ. ಕಂಪನಿ ಆಡಳಿತ ಮಂಡಳಿ ಮನವಿಯ ಮೇರೆಗೆ ಭೂಮಿಯನ್ನು ಹೆಸರು ಬದಲಾದ ಕಂಪನಿಗೆ ಹಂಚಿಕೆ ಮಾಡಲಾಗಿದೆ.
ಕಂಪನಿಯ ಮೂಲ ಮಾಲೀಕತ್ವ ಶೇ.51 ಷೇರ್ ಅನ್ನು ನಿರ್ವಹಣೆ ಮಾಡಿದ್ದಾರೆ. ಹಾಗಾಗಿ, ಭೂಮಿ ಹಕ್ಕು ಸ್ವಾಮ್ಯತೆ ವರ್ಗಾವಣೆಯಲ್ಲಿ ಲೋಪವಾಗುವುದಿಲ್ಲ ಎಂದು ಸಮರ್ಥಿಸಿಕೊಂಡರು. ಕೆಐಎಡಿಬಿ ಹಳೆಯ ದರಕ್ಕೆ ಭೂಮಿ ನೀಡಿದ್ದು, ಸರಳ ಬಡ್ಡಿ ವಿಧಿಸಿದೆ. ಸರ್ಕಾರದ ಉದ್ದೇಶ ಕಂಪನಿಯವರು ಲಾಭ ಮಾಡಿಕೊಳ್ಳಲಿ ಎಂಬುದಲ್ಲ. ಬದಲಾಗಿ ಹೂಡಿಕೆ ಬರಬೇಕು ಎಂಬುದಾಗಿ. ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ಸರ್ಕಾರದ ಉದ್ದೇಶ. ಈ ವ್ಯವಹಾರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:'ರಾಮಕೋಟಿ' ಬರೆದು ಭದ್ರಾಚಲಂಗೆ ಯಾತ್ರೆ ಬೆಳೆಸಿದ ಕೋಲಾರದ ಮುಸ್ಲಿಂ ವ್ಯಕ್ತಿ!
ಎಕರೆಗೆ 50 ಲಕ್ಷ :ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, 1972ರಲ್ಲಿ ಕಾಡುಗೋಡಿ ಸರ್ವೆ ನಂಬರ್ 1 ನಿವೇಶನ ಸಂಖ್ಯೆ 6ರಲ್ಲಿ 78 ಎಕರೆ ಜಮೀನನ್ನು ಸ್ಟೇರ್ ಇಂಡಿಯಾ ಸಂಸ್ಥೆಗೆ ನೀಡಲಾಗಿತ್ತು. ಈ ಮಧ್ಯೆ ಆ ಸಂಸ್ಥೆ ಸ್ಟೇರ್ ಇಂಡಿಯಾ ಹೆಸರನ್ನು ಕಾನ್ ಕಾರ್ಡ್ ಎಂದು ಬದಲಾವಣೆ ಮಾಡಿಕೊಂಡಿದೆ. ವಿವಾದ ಸೃಷ್ಟಿಯಾಗಿ ಭೂಮಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಒಳಪಟ್ಟಿದೆ.
2007ರಲ್ಲಿ ಮತ್ತೆ ಕಂಪನಿಯು ಹೆಸರು ಬದಲಾವಣೆ ಮಾಡಿಕೊಂಡಿದೆ. ಹೆಸರು ಬದಲಾದ ಕಂಪನಿಗೆ ಪ್ರತಿ ಎಕರೆಗೆ 50 ಲಕ್ಷ ರೂಪಾಯಿಯಂತೆ ಶುಲ್ಕ ಪಡೆದು ಭೂಮಿ ನೀಡಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ವಿವಾದ 2020ರ ಸೆಪ್ಟಂಬರ್ ವೇಳೆಗೆ ಇತ್ಯರ್ಥಗೊಂಡಿದೆ. 2018ರಿಂದ ಹನ್ನೊಂದು ವರ್ಷಕ್ಕೆ ಭೂಮಿ ಗುತ್ತಿಗೆಯ ಕರಾರನ್ನು ನವೀಕರಿಸಲಾಗಿದೆ.
ಕಂಪನಿ ಮತ್ತೆ ಹೆಸರು ಬದಲಾವಣೆ ಮಾಡಿಕೊಂಡಿದೆ. ಭೂಮಿಯನ್ನು ಪರಿವರ್ತಿತ ಕಂಪನಿ ಹೆಸರಿಗೆ ನೀಡಬೇಕು ಎಂದು ಪತ್ರ ಕೊಟ್ಟಾಗ ಅದನ್ನು ಒಪ್ಪಿಕೊಂಡು ಮೂರನೇ ವ್ಯಕ್ತಿಯ ಅಭಿಪ್ರಾಯ ಪಡೆದು, ಸರ್ಕಾರದ ಗಮನಕ್ಕೆ ತರದೆ, ಮಂಡಳಿಯಲ್ಲೂ ಚರ್ಚಿಸದೆ ಭೂಮಿಯನ್ನು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾನ್ ಕಾರ್ಡ್ ಸಂಸ್ಥೆ ಹೆಸರು ಬದಲಾವಣೆ ಮಾಡುವಾಗ ಸೂಕ್ತ ಅನುಮತಿ ಪಡೆದಿಲ್ಲ, ಸರ್ಕಾರದ ಗಮನಕ್ಕೂ ತಂದಿಲ್ಲ. ಸರ್ಕಾರ ನೀಡಿದ ಭೂಮಿಯನ್ನು ರಿಯಲ್ ಎಸ್ಟೇಟ್‌ಗೆ ಬಳಕೆ ಮಾಡಿಕೊಂಡು ಖಾಸಗಿ ವ್ಯಕ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಹಗರಣವನ್ನು ಸದನ ಸಮಿತಿಯ ತನಿಖೆ ಒಪ್ಪಿಸಿ ಎಂದು ಪಟ್ಟು ಹಿಡಿದರು.
ಎಚ್ಚರಿಕೆ ವಹಿಸುತ್ತೇನೆ :ಸಚಿವ ನಿರಾಣಿ ಉತ್ತರ ನೀಡಿ, 52 ವರ್ಷದಿಂದ ಭೂಮಿ ವರ್ಗಾವಣೆ ವ್ಯವಹಾರ ನಡೆದಿದೆ. ಕೆಲವೊಂದು ಪ್ಲಾನ್ ಬದಲಾವಣೆ ಮಾಡಿದೆ, ಮೂರು ಎಕರೆ ಸಮಸ್ಯೆ ಇದೆ ಇದೆ. ಶೇ.30ರಷ್ಟು ಹಣ ಪಾವತಿಸಿ ಬಾಕಿ ಉಳಿಸಿಕೊಂಡ ಹಲವು ಪ್ರಕರಣಗಳು ಉಳಿದಿವೆ. ಅಂತಹದ್ದರಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಕೆಐಎಡಿಬಿಗೆ ಬಾಕಿ ಬರಬೇಕಿದೆ. ಮತ್ತೊಮ್ಮೆ ಕಡತವನ್ನು ಪರಿಶೀಲಿಸುತ್ತೇನೆ. ತನಿಖೆ ಮಾಡಿ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದರು.
ಸಚಿವ ಮುರುಗೇಶ್ ನಿರಾಣಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ದಿನಗಳಲ್ಲಿ ವಿಸ್ತೃತ ಉತ್ತರ ನೀಡಲಾಗುವುದು ಎಂದರು. ತಪ್ಪುಗಳಾಗಿವೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಇಲಾಖೆ ಅಧಿಕಾರಿಗಳೇ ತಪ್ಪು ಮಾಡಿದ್ದಾರೆ, ಅವರಿಂದ ಮತ್ತೆ ಏನು ತನಿಖೆ ಮಾಡಿಸುತ್ತೀರಾ.. ಸಚಿವರ ನೇತೃತ್ವದಿಂದಲೇ ಸದನ ಸಮಿತಿ ಮಾಡಿ ಎಂದು ಮರಿತಿಬ್ಬೇಗೌಡ ಒತ್ತಾಯಿಸಿದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಈ ಪ್ರಕರಣದಲ್ಲಿ ಭಾಗಿಯಾಗದ ಅಧಿಕಾರಿಯಿಂದ ತನಿಖೆ ನಡೆಸುವುದಾಗಿ ಸ್ಪಷ್ಟ ಪಡಿಸಿದರು.