ಬೆಂಗಳೂರು: ಭೂಸ್ವಾಧೀನ ಪರಿಹಾರ ಅಕ್ರಮ ವಿಚಾರದ ಕುರಿತು ತನಿಖೆ ಮಾಡಿಸುವ ಯೋಗ್ಯತೆ ಇಲ್ಲ ಎಂಬ ಮರಿತಿಬ್ಬೇಗೌಡ ಹೇಳಿಕೆಗೆ ಕೈಗಾರಿಕಾ ಸಚಿವ ನಿರಾಣಿ ತಿರುಗೇಟು ನೀಡಿದರು. ಸರಿಯಾಗಿ ಮಾತನಾಡಿ, ಅರಚಾಡಬೇಡಿ. ನಾನು ಉತ್ತರ ಕರ್ನಾಟಕದವನು. ನಿಮಗಿಂತ ಹತ್ತರಷ್ಟು ಜೋರು ಮಾತನಾಡಲು ಬರಲಿದೆ ಎಂದು ಕೈ ತೋರಿಸಿ ವಾಗ್ದಾಳಿ ನಡೆಸಿದರು. ಇದರಿಂದ ಸದನದಲ್ಲಿ ಕೆಲಕಾಲ ಗದ್ದಲ ಸೃಷ್ಟಿಯಾಯಿತು.
ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಬಿಎಂಆರ್ಸಿಎಲ್ಗೆ ಹಂಚಿಕೆ ಮಾಡಿ 22 ಕೋಟಿ ರೂ. ಪರಿಹಾರ ಕೊಡಲಾಗಿದೆ. 12 ಗುಂಟೆ ಬಿಡಿಎ ಆಸ್ತಿಗೆ ಖಾಸಗಿ ವ್ಯಕ್ತಿಗೆ 22 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆರೋಪಿಸಿದರು.
ಅವ್ಯವಹಾರ ನಡೆದಿಲ್ಲ:ಇದಕ್ಕೆ ಉತ್ತರಿಸಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಹೋಬಳಿಯಲ್ಲಿ 32 ಗುಂಟೆ ಸ್ವಾಧೀನ, ಕಟ್ಟಡಗಳಿದ್ದ ಕಾರಣ 12 ಗುಂಟೆಯನ್ನು ಸ್ವಾಧೀನದಿಂದ ಕೈಬಿಡಲಾಗಿತ್ತು. 15 ವರ್ಷವಾದರೂ ಭೂಮಿ ಕಳೆದುಕೊಂಡ ವ್ಯಕ್ತಿಗೆ ಪರಿಹಾರ ಸಿಕ್ಕಿಲ್ಲ. ಸ್ವಾಧೀನಪಡಿಸಿಕೊಂಡ ಜಮೀನು ಸ್ವಾಧೀನವಾಗದೇ ಇದ್ದಲ್ಲಿ ಸ್ವಾಧೀನ ಪ್ರಕ್ರಿಯೆ ರದ್ದಾಗಲಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡು ಪರಿಹಾರ ನೀಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ತನಿಖೆ ಮಾಡಿಸುವ ಯೋಗ್ಯತೆ ಇಲ್ಲ ನಿಮಗೆ ಎಂದರು. ಇದಕ್ಕೆ ತಿರುಗೇಟು ನೀಡಿದ ಸಚಿವ ನಿರಾಣಿ ಸರಿಯಾಗಿ ಮಾತನಾಡಿ, ಅರಚಾಡಬೇಡಿ. ಇವರ ಯೋಗ್ಯತೆಗೆ ನಾಚಿಕೆಯಾಗಬೇಕು ಎಂದರು. ಅಲ್ಲಿಗೆ ಚರ್ಚೆ ಸ್ಥಗಿತಗೊಳಿಸಿ ಸಭಾಪತಿಗಳು ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು.