ಬೆಂಗಳೂರು:ಮಾತಾ ಅಮೃತಾನಂದಮಯಿ ಟ್ರಸ್ಟ್ ಸಾಮಾಜಿಕ ಸೇವೆಗಳನ್ನು ನೀಡುವುದಾಗಿ ತಿಳಿಸಿ ಸರ್ಕಾರದಿಂದ ಜಮೀನು ಪಡೆದು ಆ ಜಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದೆ ಎಂದು ಆರೋಪಿಸಿರುವ ಪ್ರಕರಣದ ಸಂಬಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಮಾತಾ ಅಮೃತಾನಂದಮಯಿ ಸರ್ಕಾರಿ ಜಮೀನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ನಗರದ ವರ್ತೂರು ಬಳಿಯ ಕಸವಹಳ್ಳಿ ನಿವಾಸಿಗಳಾದ ಕವಿತಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ಎಚ್.ಹನುಮಂತಪ್ಪ ವಾದಿಸಿ, ಮಾತಾ ಅಮೃತಾನಂದಮಯಿ ಟ್ರಸ್ಟ್ ಬಡ ವಿಧವೆಯರಿಗೆ 2 ಸಾವಿರ ಮನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದೇವಸ್ಥಾನ, ಆಶ್ರಮ, ಅನಾಥ ಮಕ್ಕಳಿಗೆ ಶಾಲೆ, ಉಚಿತ ವೈದ್ಯಕೀಯ ಕೇಂದ್ರ ಸ್ಥಾಪಿಸುವುದಾಗಿ ಹೇಳಿ ಸರ್ಕಾರದಿಂದ ಕಡಿಮೆ ಬೆಲೆಗೆ ಜಮೀನು ಪಡೆದುಕೊಂಡಿತ್ತು.
ಅದರಂತೆ ಸರ್ಕಾರ ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಬಳಿಯ ಕಸವನಳ್ಳಿಯಲ್ಲಿ 22 ಎಕರೆ ಜಮೀನು ನೀಡಿತ್ತು. 2000ನೇ ಇಸವಿಯ ಸೆ.20ರಂದು ಕಂದಾಯ ಇಲಾಖೆಯಿಂದ ಕಡಿಮೆ ಬೆಲೆಗೆ ಭೂಮಿ ಪಡೆದುಕೊಂಡ ಟ್ರಸ್ಟ್ ಅದೇ ಜಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ನಿರ್ಮಿಸುವ ಮೂಲಕ ಭೂ ಮಂಜೂರಾತಿ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪಿಸಿದ ಟ್ರಸ್ಟ್ ಪರ ಹಿರಿಯ ವಕೀಲ ಕೆ.ಜಿ.ರಾಘವನ್, ಯಾವುದೇ ಷರತ್ತು ಉಲ್ಲಂಘನೆಯಾಗಿಲ್ಲ ಎಂದರು.
ವಾದ ಪ್ರತಿವಾದ ಆಲಿಸಿದ ಪೀಠ, ಅಮೃತಾನಂದಮಯಿ ಟ್ರಸ್ಟ್‌ಗೆ ಮಂಜೂರು ಮಾಡಿರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಯೊಬ್ಬರನ್ನು ಸರ್ಕಾರ ನೇಮಿಸಬೇಕು. ಆ ಅಧಿಕಾರಿಯು ಭೂ ಮಂಜೂರಾತಿ ಆದೇಶದ ಷರತ್ತು ಉಲ್ಲಂಘನೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತು. ಜತೆಗೆ, ಷರತ್ತು ಉಲ್ಲಂಘನೆ ಕುರಿತು 2019ರ ಅ.4ರಂದು ಟ್ರಸ್ಟ್ ಗೆ ಸರ್ಕಾರದ ವತಿಯಿಂದ ಜಾರಿ ಮಾಡಿರುವ ನೋಟಿಸ್ ಮೇಲೆ ಯಾವ ಕ್ರಮ ಜರುಗಿಸಲಾಗಿದೆ ಎಂಬ ಬಗ್ಗೆಯೂ ಮುಂದಿನ ವಿಚಾರಣೆ ವೇಳೆ ಪೀಠಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.