ಬೆಂಗಳೂರು: ಕೋವಿಡ್ 2ನೇಯ ಅಲೆ ತಂದಿರುವ ಅವಾಂತರ ಒಂದೆರಡಲ್ಲ. ಸರ್ಕಾರದ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ಡೌನ್ಗೂ ಸಹ ವೈರಸ್ ತನ್ನ ಪ್ರಭಾವ ಕಡಿಮೆ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಿರುವಾಗ ಕೊರೊನಾ ವಸ್ತುಸ್ಥಿತಿಯ ಬಗ್ಗೆ ಸರ್ಕಾರದ ಬೇಜವಾಬ್ದಾರಿತನ ತೋರಿದೆ ಎಂದು ಆರೋಪಿಸಿ ನಗರದ ಹಿರಿಯ ನಾಗರಿಕರಾದ ಲಲಿತ ಮೇರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪಾಲಿಕೆ ಕಮೀಷನರ್, ಆರೋಗ್ಯ ಸಚಿವ ಸುಧಾಕರ್, ಸಚಿವ ಅಶೋಕ್ ನೀವೆಲ್ಲ ಲಾಯಕ್ ಇಲ್ಲ, ನೀವೆಲ್ಲಾ ಮನುಷ್ಯರೇ ಅಲ್ಲವೆಂದು ನೊಂದ ಮಹಿಳೆ ಕಣ್ಣೀರಿಡುತ್ತಾ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಕೋವಿಡ್ ಚೆಕ್ ಮಾಡಿಸಿದಾಗ ಮೊದಲು ಪಾಸಿಟಿವ್ ಬಂದಿತ್ತು, ಕಿಮ್ಸ್ ನಲ್ಲಿ ಯಾವುದೇ ಟ್ರೀಟ್ಮೆಂಟ್ ನೀಡಿರುವುದಾಗಿ 1 ಲಕ್ಷ ರೂ. ಪೀಕಿದ್ದಾರೆ ಎಂದು ಲಲಿತ ಮೇರಿ ಆರೋಪಿಸಿದ್ದಾರೆ.
ಬಿಬಿಎಂಪಿಗೆ ಹೋದ್ರೆ ಫ್ರೀ ಆಗುತ್ತೆ ಅಲ್ಲಿಗೆ ಹೋಗಿ ಅಂದರು. ಬಿಬಿಎಂಪಿಗೆ ಹೋಗಿ ಆಯುಕ್ತರ ಆಪ್ತಸಹಾಯಕಿ ಮಹೇಶ್ವರಿಯನ್ನ ಭೇಟಿಯಾಗಿ ಮಾತಾಡಿದ್ದೇವೆ. ಆದರೆ ಬಿಯು ನಂಬರ್ ಬರಲೇ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.