ಬೆಂಗಳೂರು : ಮೋಡ ಕವಿದ ವಾತಾವರಣ, ಮಳೆಯ ನಡುವೆಯೂ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಇಂದು (ಭಾನುವಾರ) ಮುಂಜಾನೆಯಿಂದಲೇ ಜನ ಸಾಗರ ಹರಿದುಬಂದಿತ್ತು. ವೀಕೆಂಡ್ ಇರುವುದರಿಂದ ಮೊದಲ ದಿನವಾದ ಶನಿವಾರ 28 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, 18.5 ಲಕ್ಷ ರೂ. ಸಂಗ್ರಹವಾಗಿತ್ತು. ಇನ್ನು ಇಂದು 67 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಅಂದಾಜು 47 ಲಕ್ಷ ರೂ ಸಂಗ್ರಹವಾಗಿದೆ.
ಇಂದು ಭಾನುವಾರ ರಜಾದಿನವಾದ್ದರಿ೦ದ ಐಟಿ ಉದ್ಯೋಗಿಗಳು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕಿಕ್ಕಿರಿದು ಸೇರಿದ್ದ ಜನರು ಗಾಜಿನ ಮನೆಯೊಳಗೆ ಹಾಗೂ ಹೊರಗೆ ನಿರ್ಮಿಸಲಾದ ಹೂಗಳ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸೆಲ್ಫಿ ಫೋಟೊಗಳನ್ನು ತೆಗೆದುಕೊಂಡು ಸಂಭ್ರಮಿಸಿದರು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 4 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಬೃಹತ್ ಹೂವಿನ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ವಿಶೇಷ ಆಕರ್ಷಣೆಯಾಗಿದೆ. ಗಾಜಿನ ಮನೆಯ ಕೇಂದ್ರಭಾಗದಲ್ಲಿ ನಿರ್ಮಿಸಿರುವ ವಿಧಾನಸೌಧ ಮತ್ತು ಶಿವಪುರ ಸತ್ಯಾಗ್ರಹಸೌಧದ ಪುಷ್ಪ ಮಾದರಿ ಜನರನ್ನು ಆಕರ್ಷಿಸುತ್ತಿವೆ.
ಕರ್ನಾಟಕದ ಭೂಪಟ, ಕನ್ನಡ ವರ್ಣಮಾಲೆ ಪ್ರತಿಕೃತಿಗಳನ್ನು ಜನರು ವೀಕ್ಷಿಸಿದರು. ಶಕ್ತಿಯೋಜನೆಯ ಫಲವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಮೀಪದ ಊರು ಹಾಗೂ ವಿವಿಧ ಜಿಲ್ಲೆಗಳಿಂದ ಸಂಖ್ಯೆಯಲ್ಲಿ ಆಗಮಿಸಿದ್ದರು. ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರ ವಾಹನ ಪಾರ್ಕಿಂಗ್ ಮಾಡಲು ಈಗಾಗಲೇ ಹಲವು ಕಡೆ ವ್ಯವಸ್ಥೆ ಮಾಡಲಾಗಿದೆ. ಆದರೂ ಇಂದು ರಜಾ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಇದರಿಂದ ಲಾಲ್‌ಬಾಗ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಯಿತು. ನಮ್ಮ ಮೆಟ್ರೋ ಮೂಲಕವೂ ಲಾಲ್ ಬಾಗ್ಗೆ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರು.