ಬೆಂಗಳೂರು: ಕಳೆದ 2 ವರ್ಷಗಳಿಂದ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ ನಡೆದಿರಲಿಲ್ಲ. ಈ ಬಾರಿ ಆಗಸ್ಟ್ 5 ರಿಂದ 15 ರ ವರೆಗೆ ಪ್ರದರ್ಶನ ನಡೆಯಲಿದ್ದು, ಎಂದಿಗಿಂತ ಮೂರು ಪಟ್ಟು ಜನರನ್ನು ಅಪೇಕ್ಷಿಸಲಾಗುತ್ತಿದೆ. ಸುಮಾರು 2 ರಿಂದ 2. 5 ಕೋಟಿ ರೂ. ವೆಚ್ಚದಲ್ಲಿ ಆಯೋಜಿಸಲಾಗುತ್ತಿರುವ ಪ್ರದರ್ಶನವನ್ನು ಡಾ.ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರಿಗೆ ಸಮರ್ಪಿಸಲಾಗಿದೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದರು.
ಸುಮಾರು 13 ರಿಂದ 15 ಲಕ್ಷ ಜನ ಬರಬಹುದು ಎಂದು ಅಂದಾಜಿಸಲಾಗಿದೆ. ಆಗಸ್ಟ್ 5 ರಂದು ಬೆಳಗ್ಗೆ 11 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಡಾ.ರಾಜ್ ಅವರ ಸಂಪೂರ್ಣ ಕುಟುಂಬ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ತೋಟಗಾರಿಕಾ ಸಚಿವ ಮುನಿರತ್ನ ಅವರು ಮಾತನಾಡಿರುವುದು ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದ ಈ ಪ್ರದರ್ಶನದಲ್ಲಿ ಅವರಿಬ್ಬರ ಬಂಗಾರಲೇಪಿತ ಪ್ರತಿಮೆಗಳನ್ನು ಇರಿಸಲಾಗಿದೆ. ರಾಜ್ ಅವರ ಮನೆಯ ಪುಷ್ಪ ಮಾದರಿಯನ್ನು 30 ಅಡಿ ಉದ್ದ, 15 ಅಡಿ ಅಗಲ ಹಾಗೂ 13 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಅದಕ್ಕೆ ಸುಮಾರು 1.75 ಲಕ್ಷ ಗುಲಾಬಿ ಹಾಗೂ 1.50 ಲಕ್ಷ ಸೇವಂತಿ ಬಳಸಲಾಗುತ್ತದೆ. ಪುನೀತ್ ಅವರ ಕನಸಿನ ಕೂಸಾದ ಶಕ್ತಿ ಧಾಮದ ಹೂವಿನ ಮಾದರಿ ಲಾಲ್‌ಬಾಗ್‌ನಲ್ಲಿ ರೂಪುಗೊಂಡಿದ್ದು, ಅದಕ್ಕೆ 1.06 ಲಕ್ಷ ಗುಲಾಬಿ ಮತ್ತು 40 ಸಾವಿರ ಸೇವಂತಿಗೆ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೆಳ್ಳಿ ರಥದಲ್ಲಿ ಲಾಲ್ಬಾಗ್ಗೆ ಡಾ.ರಾಜ್, ಪುನೀತ್ ಜ್ಯೋತಿ:ಡಾ.ರಾಜ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಜ್ಯೋತಿಯನ್ನು ಆಗಸ್ಟ್ 5ರಂದು ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ತಂದು ಸ್ಮಾರಕಕ್ಕೆ ಪೂಜೆ ಸಲ್ಲಿಸಿ, ಸೈಕಲ್ ಜಾಥಾದೊಡನೆ ಬೆಳ್ಳಿ ರಥದಲ್ಲಿ ಲಾಲ್‌ಬಾಗ್‌ನ ಸಸ್ಯತೋಟದ ಗಾಜಿನ ಮನೆಗೆ ತರಲಾಗುತ್ತದೆ ಎಂದರು.
988 ಪ್ರದರ್ಶಕರು: ಪುಷ್ಪ ಪ್ರದರ್ಶನಕ್ಕೆ ಒಟ್ಟು 988 ಪ್ರದರ್ಶಕರು ಬರಲಿದ್ದಾರೆ. ಈ ಬಾರಿ 65 ಕ್ಕೂ ಹೆಚ್ಚು ಬಗೆಯ ಹೂಗಳು ಇರಲಿವೆ. ಅದರಲ್ಲಿ ಹೂಕುಂಡಗಳ ಸಂಖ್ಯೆ 3.5 ಲಕ್ಷ ಇರಲಿದೆ. ಊಟಿ ಗಿರಿಧಾಮದ ಹೂಗಳ ಪ್ರದರ್ಶನ ಇರಲಿದೆ. ಸುಮಾರು 20 ಬಗೆಯ 2500 ಹೂ ಕುಂಡಗಳು, ಹಾಲೆಂಡ್, ನ್ಯೂಜಿಲ್ಯಾಂಡ್, ಅಮೆರಿಕ, ಆಫ್ರಿಕಾ, ಕೀನ್ಯಾ ಸೇರಿದಂತೆ 10 ದೇಶಗಳ 27 ಬಗೆಯ 2200 ವಿಶೇಷ ಹೂಕುಂಡಗಳಿರಲಿದೆ ಎಂದು ತಿಳಿಸಿದರು.
ಮಕ್ಕಳಿಗೆ ಸಂಪೂರ್ಣ ಉಚಿತ:ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ 11 ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ. ಪ್ರವೇಶ ದರ 70 ರಿಂದ 75 ರೂ ಇರಲಿದೆ. 10ನೇ ತರಗತಿ ಒಳಗಿನ ಮಕ್ಕಳಿಗೆ ಸಂಪೂರ್ಣ ಉಚಿತ. ಈ ಪುಷ್ಪಗಳ ಪ್ರದರ್ಶನದ ಜೊತೆಗೆ ಇತರ ಕರಕುಶಲ ಕಲೆಗಳ ಪ್ರದರ್ಶನವೂ ಆಯೋಜಿಸಲಾಗಿದ್ದು, ಅದರ ಕುರಿತಾದ ಉಚಿತ ತರಬೇತಿಗಳು ಲಾಲ್‌ಬಾಗ್‌ನಲ್ಲಿ ನಡೆಯಲಿದೆ ಎಂದು ಮುನಿರತ್ನ ಹೇಳಿದರು.
ಇದನ್ನೂ ಓದಿ:ಸಚಿವ ಪ್ರಭು ಚೌವ್ಹಾಣ್ ಹೆಸರಿನಲ್ಲಿ ಸಹಿ ಮಾಡಿ ನಕಲಿ ನೇಮಕಾತಿ ಆದೇಶ ಹೊರಡಿಸಿದ ಕಿಡಿಗೇಡಿಗಳು!