ಬೆಂಗಳೂರು: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಇಂದು ಅದ್ಧೂರಿ ತೆರೆಬಿದ್ದಿದ್ದು, ಕೊನೆಯ ದಿನವಾದ ಇಂದು (ಮಂಗಳವಾರ) ಪ್ರದರ್ಶನ ವೀಕ್ಷಿಸಲು ಸಸ್ಯಕಾಶಿಗೆ ಜನಸಾಗರವೇ ಹರಿದುಬಂದಿತ್ತು. ಆಗಸ್ಟ್ 4ರಿಂದ 15ರವರೆಗೆ ಒಟ್ಟಾರೆ 5 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದು, 4 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.
ಸ್ವಾತಂತ್ರ್ಯೋತ್ಸವದ ದಿನವಾದ ಇಂದು ಜನಜಂಗುಳಿ ನೆರೆದಿತ್ತು. ಫ್ಲವರ್ ಶೋಗೆ 2.45 ಲಕ್ಷಕ್ಕೂ ಹೆಚ್ಚು ಜನರು ಭೇಟಿ ಕೊಟ್ಟಿದ್ದು, ಪ್ರವೇಶ ಶುಲ್ಕದಿಂದ 90 ಲಕ್ಷ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ. 12 ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನದಿಂದ ಒಟ್ಟು ನಾಲ್ಕು ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಿದ್ದು, 8.26 ಲಕ್ಷ ಜನರು ಭೇಟಿ ನೀಡಿದ್ದಾರೆ.
ರಜಾ ದಿನಗಳಲ್ಲಿ ಹೆಚ್ಚು ವೀಕ್ಷಕರು ಆಗಮಿಸಿದ್ದಾರೆ. ಪ್ರವೇಶ ಶುಲ್ಕ 80 ರೂ ಇದ್ದುದರಿಂದ ಈ ಬಾರಿ ಹೆಚ್ಚು ಹಣ ಸಂಗ್ರಹವಾಗಿದೆ. ವಿವಿಧ ಹೂಗಳಿಂದ ರಚಿಸಿದ ವಿಧಾನಸೌಧದ 18 ಅಡಿ ಎತ್ತರದ ಪ್ರತಿಕೃತಿ, 14 ಅಡಿಯ ಕೆಂಗಲ್ ಹನುಮಂತಯ್ಯನವರ ವಿಗ್ರಹ ಫಲಪುಷ್ಪ ಪ್ರದರ್ಶನದ ವಿಶೇಷತೆಯಾಗಿತ್ತು.
ವಿವಿಧ ಹೂವುಗಳ ಬಳಕೆ:ಪ್ರದರ್ಶನದಲ್ಲಿ ಬಗೆ ಬಗೆಯ ಗುಲಾಬಿ ಹೂಗಳು, ಜರ್ಬೇರಾ, ಆಂಥೋರಿಯಂ ಹೂಗಳು, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ಆರ್ಕಿಡ್, ಆಲ್ಸ್ಟೋರೇಮೇರಿಯನ್ ಲಿಲ್ಲಿ, ರೆಡ್‌ಹಾಟ್ ಪೋಕರ್, ಪೂಷಿಯಾ, ಅಗಪಾಂಥಸ್, ಕ್ಯಾಲಾಲಿಲ್ಲಿ, ಸೈಕ್ಲೋಮನ್, ಸುಗಂಧರಾಜ ಸೇರಿದಂತೆ ಶೀತ ವಲಯದ ಹೂಗಳನ್ನು ಬಳಸಲಾಗಿತ್ತು.