ಕರ್ನಾಟಕ

karnataka

ETV Bharat / state

ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಒಲಿದ ಸಚಿವ ಸ್ಥಾನ: ಸವದಿ, ಅಶೋಕ್ ಪಟ್ಟಣ ಸೇರಿ ಇತರರಿಗೆ ನಿರಾಶೆ - ಬೆಳಗಾವಿ

ಶುಕ್ರವಾರ ಸಂಜೆ ಬಿಡುಗಡೆ ಮಾಡಿದ ಕಾಂಗ್ರೆಸ್ ಪಟ್ಟಿಯಲ್ಲಿ 24 ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಬಿಜೆಪಿ ಬಿಟ್ಟು ಬಂದು ಕಾಂಗ್ರೆಸ್ ಸೇರಿ ಭಾರಿ ಅಂತರದಿಂದ ಗೆದ್ದಿದ್ದ ಅಥಣಿ ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನಿರಾಶೆಯಾಗಿದೆ.

Lakshmi Hebbalkar, Lakshmana Savadi and Ashoka Pattana
ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ ಹಾಗೂ ಅಶೋಕ ಪಟ್ಟಣ

By

Published : May 27, 2023, 7:09 AM IST

ಬೆಳಗಾವಿ: ಘಟಾನುಘಟಿ ನಾಯಕರ ನಡುವೆ ಕಾಂಗ್ರೆಸ್​ನ 2ನೇ ಪಟ್ಟಿಯಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಯಶಸ್ವಿಯಾಗಿದ್ದಾರೆ. ಶುಕ್ರವಾರ ಸಂಜೆ ಬಿಡುಗಡೆ ಮಾಡಿದ ಕಾಂಗ್ರೆಸ್ ಪಟ್ಟಿಯಲ್ಲಿ 24 ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಗೆ ಮತ್ತೆರಡು ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಕೇವಲ ಒಂದೇ ಸ್ಥಾನ ಸಿಕ್ಕಿದ್ದು, ಅದು ಲಕ್ಷ್ಮೀ ಹೆಬ್ಬಾಳ್ಕರ್ ಪಾಲಾಗಿದೆ. ಬಿಜೆಪಿ ಬಿಟ್ಟು ಬಂದು ಕಾಂಗ್ರೆಸ್ ಸೇರಿ ಭಾರಿ ಅಂತರದಿಂದ ಗೆದ್ದಿದ್ದ ಅಥಣಿ ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಸಚಿವರಾಗಲಿದ್ದಾರೆ ಎಂಬ ಮಾತು ಹುಸಿಯಾಗಿದೆ.

ಇದನ್ನೂ ಓದಿ:ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಶಾಸಕರು

ಸಚಿವ ಸ್ಥಾನದ‌ ಆಕಾಂಕ್ಷಿಗಳಾಗಿದ್ದ ರಾಮದುರ್ಗ ಕ್ಷೇತ್ರದಿಂದ 3 ಬಾರಿ ಗೆದ್ದಿರುವ ಶಾಸಕ ಅಶೋಕ ಪಟ್ಟಣ, ಬೈಲಹೊಂಗಲ ಕ್ಷೇತ್ರದಿಂದ 4 ಬಾರಿ ಗೆದ್ದಿರುವ ಶಾಸಕ ಮಹಾಂತೇಶ ಕೌಜಲಗಿ, ಸತತ 3 ಬಾರಿ‌ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಆಯ್ಕೆಯಾಗಿರುವ ಗಣೇಶ ಹುಕ್ಕೇರಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು ತೀವ್ರ ನಿರಾಸೆ ಉಂಟು ಮಾಡಿದೆ. ಮೊದಲ ಪಟ್ಟಿಯಲ್ಲೇ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮಂತ್ರಿಯಾಗಿದ್ದರು. ಈ ಮೂಲಕ 11 ಶಾಸಕರನ್ನು ಗೆಲ್ಲಿಸಿ ಕೊಟ್ಟಿರುವ ಬೆಳಗಾವಿ ಜಿಲ್ಲೆ ಕೇವಲ ಎರಡು ಮಂತ್ರಿ ಸ್ಥಾನಕ್ಕೆ ಮಾತ್ರ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

ಒಟ್ಟಾರೆ ನಾಲ್ಕು ಬಾರಿ, ಮೂರು ಬಾರಿ ಗೆದ್ದಿರುವ ಹಿರಿಯ ಶಾಸಕರನ್ನು ಕೈ ಬಿಟ್ಟು ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿರುವುದು ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಂದು ಬೆಂಗಳೂರಿನ ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 24 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಂಪುಟದಲ್ಲಿ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ: ಜಾತಿವಾರು ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಜತೆಗೆ ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರನ್ನು ಸಚಿವಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳುವ ಕಸರತ್ತಿನಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ. ಈ ಸಾರಿ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿರುವ ಲಿಂಗಾಯತ ಸಮುದಾಯಕ್ಕೆ ಒಟ್ಟು ಏಳು ಸಚಿವ ಸ್ಥಾನ ನೀಡಲಾಗಿದ್ದು ಈ ಸಮುದಾಯದ ಬಹುತೇಕ ಎಲ್ಲಾ ಪ್ರಮುಖ ಒಳಪಂಗಡಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಸಂಪುಟದಲ್ಲಿ ಪ್ರಾದೇಶಿಕ ಸಮತೋಲನ: ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೂ ಪ್ರಾತಿನಿಧ್ಯ ದೊರೆತಿದೆ. ಮಲೆನಾಡು, ಕರಾವಳಿ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕಕ್ಕೆ ಸಿಕ್ಕಿರುವ ಪ್ರಾತಿನಿಧ್ಯ ಜಾತಿವಾರು ಲೆಕ್ಕಾಚಾರಗಳನ್ನೂ ಸರಿದೂಗಿಸಿದೆ. ಈ ಎಲ್ಲ ಸಮತೋಲನದ ಮಧ್ಯೆ ಪ್ರಸ್ತುತ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿರುವ ಬಿಕೆ ಹರಿಪ್ರಸಾದ್​​ಗೆ ಸಚಿವ ಸ್ಥಾನ ಕೈತಪ್ಪಿದೆ. ಇದರಿಂದ ಅವರು ಬೇಸರಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸಾಮಾಜಿಕ ನ್ಯಾಯ ಪಾಲಿಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ: ಸಚಿವ ಸಂಪುಟದಲ್ಲಿ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ..

ABOUT THE AUTHOR

...view details