ಬೆಂಗಳೂರು:ಗೃಹ ಲಕ್ಷ್ಮಿ ಯೋಜನೆ ಬಹಳ ಮುಂದೆ ಬಂದಿದೆ. ಮೂರು ದಿನಗಳಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾಹಿತಿ ಕೊಡುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಗೃಹ ಲಕ್ಷ್ಮಿ ಯೋಜನೆಗೆ ಪಡಿತರ ಕಾರ್ಡ್ ಕಡ್ಡಾಯ. ಯೋಜನೆಗೆ ಅರ್ಜಿ ಹಾಕಿದ ಬಳಿಕ ಸ್ವೀಕೃತಿ ಆದಾಗ ವಾಯ್ಸ್ ಮೆಸೇಜ್ ಬರುತ್ತದೆ. ಪ್ರತಿ ತಿಂಗಳು ಹಣ ಜಮೆ ಆದಾಗಲಾ ಮೆಸೇಜ್ ಬರುತ್ತದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ವಿಚಾರವಾಗಿ ಪ್ರತಿಕ್ರಿಯಿಸಿ, ಉಡುಪಿ ಜಿಲ್ಲೆಗೆ ನಾಳೆ ಸಾಯಂಕಾಲ ಹೋಗುತ್ತೇನೆ. ಅಧಿಕಾರಿಗಳ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಎರಡು ಸಾವು ಸಂಭವಿಸಿದೆ. ಕುಟುಂಬಕ್ಕೆ 24 ಗಂಟೆಯೊಳಗೆ ಪರಿಹಾರ ಕೊಡುವಂತೆ ಹೇಳಿದ್ದೇನೆ ಎಂದು ತಿಳಿಸಿದರು.
ಆಗಸ್ಟ್ 25ರಿಂದ ಅರ್ಜಿ ಸಲ್ಲಿಕೆ ಶುರು? :ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರ್ಯ ಆಗಸ್ಟ್ 25ರಿಂದ ಪ್ರಾರಂಭವಾಗಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ರಾಜ್ಯದ 1.27 ಕೋಟಿ ಕುಟುಂಬಗಳ ಒಡತಿಯರಿಗೆ ಈ ಸೌಲಭ್ಯ ದೊರೆಯಲಿದ್ದು, ಇದಕ್ಕಾಗಿ ಸರ್ಕಾರ ಅಂದಾಜು 30 ಸಾವಿರ ಕೋಟಿ ರೂ.ಗಳನ್ನು ಭರಿಸಲಿದೆ ಎಂದು ತಿಳಿದುಬಂದಿದೆ.
ಕಾರ್ಯಕರ್ತರ ನೆರವು: ದಿನಕ್ಕೆ ಕನಿಷ್ಠ ಒಂದು ಲಕ್ಷ ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಬಹುದು ಎಂಬುದು ರಾಜ್ಯ ಸರ್ಕಾರದ ಸದ್ಯದ ಲೆಕ್ಕಾಚಾರ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಉಚಿತವಾಗಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ತೊಡಕಾಗಬಹುದು. ಈ ಹಿನ್ನೆಲೆಯಲ್ಲಿ ಜನರಿಗೆ ಸಹಾಯ ಮಾಡಲು ಪ್ರತಿ ಪಂಚಾಯತ್ಗೆ 5 ಮಂದಿ ಕಾರ್ಯಕರ್ತರನ್ನು ನೇಮಕ ಮಾಡುವುದು ಸರ್ಕಾರದ ಯೋಚನೆ. ಅರ್ಜಿ ಸಲ್ಲಿಕೆಗೆ ಯಾರಿಗಾದರೂ ತೊಡಕಾಗುತ್ತಿದ್ದರೆ, ಅವರು ಈ ಕಾರ್ಯಕರ್ತರ ಸಹಾಯ ಪಡೆದು ಯಾವುದೇ ತೊಂದರೆ ಇಲ್ಲದಂತೆ ಅರ್ಜಿ ಹಾಕಬಹುದು.
ನಿಮಗಿದು ತಿಳಿದಿರಲಿ..: ಮನೆ ಯಜಮಾನಿಯ ಬ್ಯಾಂಕ್ ಅಕೌಂಟ್‌ಗೆ 2 ಸಾವಿರ ರೂ ಜಮೆ ಮಾಡಲು ಆಧಾರ್ ಕಾರ್ಡ್, ಅಕೌಂಟ್ ನಂಬರ್ ಮೊದಲು ಕೊಡಬೇಕು. ಯೋಜನೆಯ ಫಲಾನುಭವಿಗಳು ಆಗಬೇಕಾದರೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಗಸ್ಟ್ 15ರಿಂದ ಕುಟುಂಬದ ಯಜಮಾನಿ ಅಕೌಂಟ್‌ಗೆ ಹಣ ಹಾಕಲಾಗುವುದು. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಎಲ್ಲರೂ ಈ ಯೋಜನೆಯಲ್ಲಿ ಫಲಾನುಭವಿಗಳು ಮತ್ತು ಯಾವುದೇ ಷರತ್ತುಗಳು ಅನ್ವಯಿಸುವುದಿಲ್ಲ ಎಂದು ಸರ್ಕಾರ ಈಗಾಗಲೇ ಹೇಳಿದೆ.
ಇದನ್ನು ಓದಿ:ಹಳೆ ಪಿಂಚಣಿ ಯೋಜನೆ ಜಾರಿಗೆ ಸಮಿತಿ ರಚನೆ, ಸಂಬಂಧಪಟ್ಟವರ ಜೊತೆ ಸಮಾಲೋಚನೆ: ಡಿಸಿಎಂ ಡಿ.ಕೆ.ಶಿವಕುಮಾರ್