ಬೆಂಗಳೂರು:ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ದಿನಾಂಕವನ್ನು ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯ ಕುರಿತ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾಗಿದ್ದರು. ಬಳಿಕ ಮಾತನಾಡಿದ ಅವರು, ಅಧಿಕಾರಿಗಳು ಮತ್ತು ಸಚಿವರ ಜೊತೆ ಸುದೀರ್ಘ ಸಭೆ ಆಗಿದೆ. ಒಂದು ಆ್ಯಪ್ ತಯಾರಾಗಿದೆ. ಮುಂದಿನ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡುತ್ತೇವೆ. ಯಾವತ್ತು ಅರ್ಜಿ ಸ್ವೀಕಾರ ಮಾಡಬೇಕು ಎಂದು ನಿರ್ಧಾರ ಮಾಡುತ್ತೇವೆ ಎಂದರು.
ಸಿಎಂ ಗಮನಕ್ಕೆ ತಂದು ಅರ್ಜಿ ಸ್ವೀಕಾರ ಮಾಡುತ್ತೇವೆ. ಮುಂದಿನ ವಾರ ಕ್ಯಾಬಿನೆಟ್ ಮೀಟಿಂಗ್ ಇದೆ. ಆಗಸ್ಟ್ ತಿಂಗಳಲ್ಲಿ ಯೋಜನೆ ಜಾರಿಗೆ ಬರಲಿದೆ. ಸೇವಾಸಿಂಧು ಸರ್ವರ್ ಓವರ್ ಲೋಡ್ ಆಗುತ್ತಿದೆ. ಅಪ್ಡೇಟ್ ಆದ್ರೂ ಕೂಡ ಸಮಸ್ಯೆ ಆಗುತ್ತಿದೆ. ಇದಕ್ಕೆಲ್ಲ ಆ್ಯಪ್ನಲ್ಲಿ ಪರಿಹಾರ ಸಿಗಲಿದೆ. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ರೂಪುರೇಷೆ ಸಿಗಲಿದೆ ಎಂದು ಹೇಳಿದರು.
ಕಂದಾಯ ಸಚಿವರು ನಾಡಕಚೇರಿ, ತಹಶೀಲ್ದಾರರ ಕಚೇರಿ ಬಗ್ಗೆ ಗಮನ ಹರಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರ ಇಲಾಖೆಯಡಿ ಬಾಪೂಜಿ ಕೇಂದ್ರಗಳು ಬರುತ್ತವೆ. ಹೀಗಾಗಿ ಮೂವರು ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ. ಗೃಹ ಜ್ಯೋತಿ ಯೋಜನೆಯದ್ದು ಒಂದೇ ಸಾರಿ ಓವರ್ ಲೋಡ್ ಆಗ್ತಾ ಇತ್ತು. ಲಕ್ಷಾಂತರ ಜನ ಅರ್ಜಿ ಹಾಕಿದ್ದರಿಂದ ಓವರ್ ಲೋಡ್ ಆಗಿತ್ತು. ಇದೀಗ ಗೃಹ ಜ್ಯೋತಿ ಸ್ಟೇಬಲ್ ಆಗಿದೆ ಎಂದು ಸಚಿವರು ಮಾಹಿತಿ ನೀಡಿದರು.