ಬೆಂಗಳೂರು :ವಜ್ರದ ಹರಳಿನ ಉಂಗುರ ಧರಿಸುವ ಕುರಿತು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲುಗೆ ಡಿಸಿಎಂ ಲಕ್ಷ್ಮಣ ಸವದಿ ಸಲಹೆ ನೀಡಿದರು. ಸಿಎಂ ಸಮ್ಮುಖದಲ್ಲೇ ಉಂಗುರ ಸಂಭಾಷಣೆ ನಡೆಯುತ್ತಿದ್ದರೆ, ಡಿಸಿಎಂ ಗೋವಿಂದ ಕಾರಜೋಳ ಕುತೂಹಲದಿಂದ ವೀಕ್ಷಿಸುತ್ತಿದ್ದರು.
ಖಾಸಗಿ ಹೋಟೆಲ್ನಲ್ಲಿ ಶಾಸಕರ ಜೊತೆ ಸಿಎಂ ಸಮಾಲೋಚನಾ ಸಭೆಗೂ ಮುನ್ನ ಸಿಎಂ ಸಮ್ಮುಖದಲ್ಲಿ ಉಂಗುರ ಧರಿಸುವ ಕುರಿತು ಸಚಿವರಿಬ್ಬರ ನಡುವೆ ಸಮಾಲೋಚನೆ ನಡೆಯಿತು. ಸಚಿವ ರಾಮುಲು ಬಲಗೈ ಮಧ್ಯ ಬೆರಳಿನಲ್ಲಿದ್ದ ಉಂಗುರ ಬಗ್ಗೆ ಫಿದಾ ಆದ ಡಿಸಿಎಂ ಲಕ್ಷ್ಮಣ ಸವದಿ, ದೊಡ್ಡ ಹಸಿರು ವರ್ಣದ ಹರಳು ಇದ್ದ ಉಂಗುರ ನೋಡಿ ಅದರ ಕುರಿತು ಶ್ರೀರಾಮುಲು ಅವರಿಂದ ಮಾಹಿತಿ ಪಡೆದರು. ಸಿಎಂ ಎದುರೇ ರಾಮುಲು ಕೈಯನ್ನ ತಮ್ಮ ಕೈಯಿಂದ ಹಿಡಿದು ಉಂಗುರದ ಬಗ್ಗೆ ಸವದಿ ವಿಚಾರಿಸಿದರು.
ಇದು ಯಾವ ಬೆರಳಿಗೆ ಹಾಕಿಕೊಳ್ಳಬೇಕು, ಯಾವ ಹರಳಿನ ಉಂಗುರವಿದು, ರಾಶಿ, ನಕ್ಷತ್ರದ ಆಧಾರದ ಮೇಲೆ ಹರಳನ್ನು ಧರಿಸಬೇಕು, ಯಾವ ಜ್ಯೋತಿಷಿ ಬಳಿ ಮಾತುಕತೆ ನಡೆಸಿ ಇದನ್ನು ಧರಿಸಿದ್ದೀರಿ ಎಂದು ರಾಮುಲು ಅವರನ್ನು ಪ್ರಶ್ನಿಸಿದರು.