ಬೆಂಗಳೂರು :ಹಾಡಹಾಗಲೇ ಕಾನ್‌ಸ್ಟೇಬಲ್ ಮನೆಗೆ ನುಗ್ಗಿ ಹೆದರಿಸಿ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ್ದ 10 ಮಂದಿ ದರೋಡೆಕೋರರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಸಿಎಆರ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಕುಮಾರ್ ಎಂಬುವರ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬಳಿಕ ನಾಗೇಂದ್ರ, ಪಾರ್ಥಿಬನ್, ಮಹದೇವ, ಸೈಯದ್ ಸಿದ್ದಿಕ್, ನಯಾಜ್ ಪಾಷಾ, ಸುರೇಶ್, ಸತೀಶ್, ಹನುಮೇಗೌಡ, ಧರ್ಮರಾಜ್, ಇಮ್ರಾನ್ ಪಾಷಾ ಹಾಗೂ ಹೇಮಂತ್ ಎಂಬ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ 5 ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣ, 1.45 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಆಟೋ ಹಾಗೂ ಎರಡು ಬೈಕ್ ಜಪ್ತಿ ಮಾಡಿದ್ದಾರೆ.
ಸಿಎಆರ್ ಕಾನ್‌ಸ್ಟೇಬಲ್ ಆಗಿ ಹಾಗೂ ಎಡಿಜಿಪಿ ಉಮೇಶ್ ಕುಮಾರ್ ಅವರಿಗೆ ಕಾರು ಚಾಲಕರಾಗಿ ಪ್ರಶಾಂತ್ ಕರ್ತವ್ಯ ನಿರ್ವಹಿಸುತ್ತಿದ್ದರು. ಅನ್ನಪೂರ್ಣೇಶ್ವರಿ ನಗರದ ಮುದ್ದಿನಪಾಳ್ಯದಲ್ಲಿರುವ ಮನೆಯೊಂದರಲ್ಲಿ ವಾಸಿಸುತ್ತಿದ್ದರು.