ಬೆಂಗಳೂರು:ನಗರದ ಜನಸಂಖ್ಯೆಗೆ ಅನುಗುಣವಾಗಿ ಎಷ್ಟು ಸಾರ್ವಜನಿಕ ಶೌಚ ಗೃಹಗಳ ಅಗತ್ಯವಿದೆ, ಪ್ರಸ್ತುತ ಎಷ್ಟು ಶೌಚ ಗೃಹಗಳಿವೆ ಎಂಬ ಬಗ್ಗೆ ನಡೆಸಿರುವ ಸಮೀಕ್ಷೆಯ ವರದಿ ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚ ಗೃಹಗಳ ಕೊರತೆ ಹಾಗೂ ಅಸಮರ್ಪಕ ನಿರ್ವಹಣೆಯನ್ನು ಪ್ರಶ್ನಿಸಿ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಪಾಲಿಕೆ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ನಗರದ ಜನಸಂಖ್ಯೆಗೆ ಅನುಗುಣವಾಗಿ ಶೌಚ ಗೃಹಗಳ ಅಗತ್ಯತೆ ಹಾಗೂ ನಿರ್ವಹಣೆ ಕುರಿತು ಸಮಗ್ರ ಸಮೀಕ್ಷೆ ನಡೆಸುವಂತೆ ಹೈಕೋರ್ಟ್ ಈ ಹಿಂದೆ ನಿರ್ದೇಶಿಸಿದೆ. ಈ ಆದೇಶದ ಅನುಸಾರ ಸಮೀಕ್ಷೆ ನಡೆಸಲಾಗಿದೆಯೇ ಎಂದಿತು. ಪಾಲಿಕೆ ಪರ ವಕೀಲರು ಉತ್ತರಿಸಿ, ಸಮೀಕ್ಷೆ ನಡೆಸಲು ಎನ್ಜಿಒ ಒಂದನ್ನು ನೇಮಕ ಮಾಡಲಾಗಿದೆ. ಅಲ್ಲದೇ, 2017ರಲ್ಲಿ ಇದೇ ವಿಚಾರವಾಗಿ ಮತ್ತೊಂದು ಎನ್ಜಿಒ ಸಮೀಕ್ಷೆ ನಡೆಸಿದ್ದು, ವರದಿ ನೀಡಿದೆ ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, 2017ರಲ್ಲಿ ಎನ್ಜಿಒ ನಡೆಸಿರುವ ಸಮೀಕ್ಷಾ ವರದಿ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ನಡೆಸಿರುವ ಸಮೀಕ್ಷೆಯ ವಿವರಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪಾಲಿಕೆಗೆ ಸೂಚಿಸಿ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿತು.
ಓದಿ:ತಾಕತ್ತಿದ್ದರೆ ಡೀಸಿಯನ್ನು ವರ್ಗಾವಣೆ ಮಾಡಿ ತೋರಿಸು: ಪ್ರತಾಪ್ ಸಿಂಹಗೆ ಜಿ.ಟಿ ದೇವೇಗೌಡ ಸವಾಲು