ಬೆಂಗಳೂರು: ಕೋವಿಡ್ ಎರಡನೇ ಅಲೆ ತಡೆಗೆ ರಾಜ್ಯದಲ್ಲಿ ಜನತಾ ಕರ್ಫ್ಯೂ ತಂದು ಇದೀಗ ಲಾಕ್ಡೌನ್ ವಿಧಿಸಲಾಗಿದೆ. ರಸ್ತೆ ಕಾಮಗಾರಿಗೆ ಅವಕಾಶ ನೀಡಲಾಗಿದ್ದರೂ ಕೂಡ ಕಾಮಗಾರಿಗೆ ಕಾರ್ಮಿಕತರ ಕೊರತೆ ಕಾಡುತ್ತಿದೆ. ಕೋವಿಡ್ ಮತ್ತು ಲಾಕ್ಡೌನ್ ಭೀತಿಯಿಂದ ಊರಿಗೆ ಮರಳಿದವರು ಅದೆಷ್ಟೋ ಮಂದಿ. ಪರಿಣಾಮ ಕಾರ್ಮಿಕರ ಕೊರತೆ ಎದುರಾಗಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದ್ದರೆ, ಹಲವೆಡೆ ಕಾಮಗಾರಿಗಳು ಸ್ಥಗಿತಗೊಂಡಿವೆ.
ಪಂಚ ರಾಜ್ಯ ಚುನಾವಣೆ ಹಿನ್ನೆಲೆ ಮತ ಚಲಾವಣೆಗೆ ಕಾರ್ಮಿಕರು ಊರಿಗೆ ಹೋಗಿದ್ದು, ಇನ್ನೂ ಬಂದಿಲ್ಲ. ಬಹುತೇಕರು ಉತ್ತರ ಭಾರತ ಹಾಗೂ ಪಶ್ಚಿಮ ಬಂಗಾಳದ ಕಾರ್ಮಿಕರು ರಸ್ತೆ ಕಾಮಗಾರಿ ಹಾಗೂ ಇನ್ನಿತರೆ ಕಟ್ಟಡ ನಿರ್ಮಾಣ ಕೆಲಸ ಮಾಡುವವರಾಗಿದ್ದು, ಇನ್ನೂ ಕೆಲಸಕ್ಕೆ ಹಿಂತಿರುಗಿಲ್ಲ ಎಂದು ಗುತ್ತಿಗೆ ಪಡೆದವರು ಮಾಹಿತಿ ನೀಡಿದ್ದಾರೆ. ಕೋವಿಡ್ ನಿಯಮಗಳು, ಲಾಕ್ಡೌನ್, ಕರ್ಫ್ಯೂನಿಂದ ಕಾರ್ಮಿಕರು ಹಿಂದಿರುಗಲು ಸಾಧ್ಯವಾಗಿಲ್ಲ.
ಸದ್ಯ ನಗರದಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅವಕಾಶವಿದೆ. ಆದರೆ ಬೇರೆ ಕಾಮಗಾರಿಗಳಿಗೆ ನಿರ್ಬಂಧ ಹೇರಲಾಗಿದೆ. ಇದರಿಂದ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಪರಿಣಾಮ ಕಾಮಗಾರಿಯ ಕೊನೆ ದಿನಾಂಕ ಕೂಡ ಮುಂದೂಡುವ ಸಾಧ್ಯತೆಗಳು ಇವೆ ಎಂದು ಗುತ್ತಿಗೆ ಪಡೆದವರೋರ್ವರು ತಿಳಿಸಿದ್ದಾರೆ.