ಬೆಂಗಳೂರು:ಕೋವಿಡ್ ಎರಡನೇ ಅಲೆ ಕರುನಾಡನ್ನೇ ಅಲುಗಾಡಿಸಿ ಬಿಟ್ಟಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಅನಿವಾರ್ಯವಾಗಿ ಲಾಕ್‌ಡೌನ್ ಹೇರಿತ್ತು. ಇದರಿಂದ ರಾಜ್ಯ ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಕೋವಿಡ್ ಅಬ್ಬರದ ಮಧ್ಯೆ ಮುಂಬರುವ ಸಂಭಾವ್ಯ ಅತಿವೃಷ್ಟಿಗೂ ಸರ್ಕಾರ ಅಣಿಯಾಗಬೇಕಾಗಿದೆ. ರಾಜ್ಯ ವಿಪತ್ತು ನಿರ್ವಹಣೆ ನಿಧಿಯಿಂದ ಕೋವಿಡ್ ನಿರ್ವಹಣೆಗಾಗಿ ಶೇ50 ಹಣ ವ್ಯಯಿಸಬಹುದಾಗಿದ್ದರೆ, ಉಳಿದ ಅರ್ಧ ಹಣದಲ್ಲಿ ಅತಿವೃಷ್ಟಿ ಎದುರಿಸಬೇಕಾಗಿದೆ.
ಈ ಬಾರಿ ಕೊರೊನಾ ಎರಡನೇ ಅಲೆಗೆ ರಾಜ್ಯ ಸಂಪೂರ್ಣ ತತ್ತರಿಸಿ ಹೋಗಿದೆ. ಕೋವಿಡ್ ನಿರ್ವಹಣೆಯೇ ಸದ್ಯ ಸರ್ಕಾರದ ಮುಂದಿರುವ ಆದ್ಯತೆ. ಇದರ ಮಧ್ಯೆ ಸರ್ಕಾರಕ್ಕೆ ಹೊಸ ತಲೆನೋವು ಎದುರಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮಳೆಯ ಆರ್ಭಟದ ಮುನ್ಸೂಚನೆ ಸಿಕ್ಕಿದೆ. ಸತತ ಮೂರು ವರ್ಷಗಳಿಂದ ಕರ್ನಾಟಕ ಅತಿವೃಷ್ಟಿಗೆ ಸಾಕ್ಷಿಯಾಗುತ್ತಿದೆ. ಈ ಬಾರಿಯೂ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ದೊರಕಿದ್ದು, ಸರ್ಕಾರ ಈಗಿನಿಂದಲೇ ಸಕಲ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಮುಂಗಾರು ಆರಂಭದಲ್ಲೇ ರಾಜ್ಯಕ್ಕೆ ತೌಕ್ತೆ ಚಂಡಮಾರುತ ಅಪ್ಪಳಿಸಿ, ಭಾರೀ ನಷ್ಟ ಉಂಟು ಮಾಡಿದೆ. ಕರಾವಳಿ ಭಾಗದಲ್ಲಿ ಚಂಡಮಾರುತ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದೆ. ಕಂದಾಯ ಇಲಾಖೆ ಅಧಿಕಾರಿಗಳು ನಷ್ಟದ ಪ್ರಮಾಣದ ವರದಿಯನ್ನು ಸಿದ್ಧಪಡಿಸಿದೆ. ಅದರಂತೆ ಕರಾವಳಿ ಕರ್ನಾಟಕ ಭಾಗಕ್ಕೆ ಅಪ್ಪಳಿಸಿದ ತೌಕ್ತೆ ಚಂಡಮಾರುತದಿಂದ ಬರೋಬ್ಬರಿ 209 ಕೋಟಿ ರೂ. ಅಂದಾಜು ನಷ್ಟ ಉಂಟಾಗಿದೆ. ಹೀಗಾಗಿ ಸರ್ಕಾರಕ್ಕೆ ಈ ಬಾರಿ ಕೋವಿಡ್ ನಿರ್ವಹಣೆಯ ಬೃಹತ್ ವೆಚ್ಚ ಮತ್ತು ಮುಂಬರುವ ಸಂಭಾವ್ಯ ಅತಿವೃಷ್ಟಿಗೆ ಹಣ ಹೊಂದಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
SDRF ಹಣದ ಕೊರತೆ ಆತಂಕದಲ್ಲಿ ಸರ್ಕಾರ:
ಒಂದೆಡೆ ಬಿಟ್ಟು ಬಿಡದೇ ಕಾಡುತ್ತಿರುವ ಅತಿವೃಷ್ಟಿ, ಪ್ರವಾಹ. ಇನ್ನೊಂದೆಡೆ ಕೋವಿಡ್ 19 ಅಟ್ಟಹಾಸ. ಈ ಎರಡು ಭೀಕರ ಪ್ರಕೃತಿ ವಿಕೋಪಗಳನ್ನು ಸಂಭಾಳಿಸುವಲ್ಲಿ ಸರ್ಕಾರ ಸುಸ್ತಾಗಿ ಹೋಗಿದೆ. ಸೀಮಿತ ಹಣದಿಂದ ಈ ಎರಡು ವಿಕೋಪವನ್ನು ನಿರ್ವಹಿಸುವುದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
2021-22ನೇ ಸಾಲಿಗೆ ಕೇಂದ್ರ ಸರ್ಕಾರದಿಂದ SDRF ಅನುದಾನವಾಗಿ ಕರ್ನಾಟಕಕ್ಕೆ 1,054 ಕೋಟಿ ರೂ. ಮಂಜೂರು ಮಾಡಿದೆ. ಮೊದಲನೇ ಕಂತಿನ ಬಾಪ್ತು ಕೇಂದ್ರದ ಪಾಲಿನ 316.4 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಈ ಹಣದಲ್ಲಿ ಶೇ 50 ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. SDRF ಹಣದಲ್ಲಿ ಅರ್ಧದಷ್ಟು ಕೋವಿಡ್ ನಿರ್ವಹಣೆಗೆ ವ್ಯಯಿಸಿದರೆ, ಅತಿವೃಷ್ಟಿ, ಅನಾವೃಷ್ಟಿಯ ನಿರ್ವಹಣೆಗೆ SDRFನಡಿ ಕೇವಲ ಶೇ50ರಷ್ಟು ಮಾತ್ರ ಉಳಿಯಳಿದೆ. ಇದರಿಂದ ಅತಿವೃಷ್ಟಿ, ಅನಾವೃಷ್ಟಿ ನಿರ್ವಹಣೆಗೆ ಹಣದ ಕೊರತೆ ಎದುರಾಗುವ ಆತಂಕ ವ್ಯಕ್ತವಾಗಿದೆ.
ಈಗಾಗಲೇ ಸರ್ಕಾರ SDRFನಡಿ 2.33 ಕೋಟಿ ರೂ. ನ್ನು ಕೋವಿಡ್ ನಿರ್ವಹಣೆಗೆ ಬಿಡುಗಡೆ ಮಾಡಿದೆ. ಇದರ ಜೊತೆಗೆ 6,000 ಗ್ರಾಮ ಪಂಚಾಯತಿಗಳಿಗೆ ಕೋವಿಡ್ ನಿರ್ವಹಣೆಗಾಗಿ ತಲಾ 50 ಸಾವಿರ ರೂ. ಎಸ್ ಡಿಆರ್ ಎಫ್ ಹಣ ಬಿಡುಗಡೆ ಮಾಡಲು ನಿರ್ಧರಿಸಿದೆ.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸುಮಾರು 643 ಕೋಟಿ ರೂ.ಹಣ ಇದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಈ ಪೈಕಿ 220 ಕೋಟಿ ರೂ. ಹಣವನ್ನು ಕೋವಿಡ್ ನಿರ್ವಹಣೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಕಳೆದ ಬಾರಿ SDRF ಹಣದಲ್ಲಿ ಬಹು ಪಾಲನ್ನು ಕೋವಿಡ್ ನಿರ್ವಹಣೆಗೆ ಬಳಸಲಾಗಿತ್ತು, ಇದರಿಂದ ಅತಿವೃಷ್ಟಿಗೆ ಸೀಮಿತ SDRF ಹಣ ಲಭಿಸಿತ್ತು.
ಈ ಬಾರಿಯೂ ಅದೇ ಬಿಕ್ಕಟ್ಟು, ಸಂಕಷ್ಟ ಇದ್ದು, ಅತಿವೃಷ್ಟಿ ನಿರ್ವಹಣೆಗೆ ಹಣದ ಕೊರತೆ ಎದುರಾಗುವುದು ನಿಶ್ಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ ಹವಾಮಾನ ಇಲಾಖೆ ಈ ಬಾರಿ ರಾಜ್ಯದ 23 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಪ್ರಪ್ರಥಮವಾಗಿ ರಾಜ್ಯ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆ 2021 ನ್ನು ಸಿದ್ಧಪಡಿಸಲಾಗಿದ್ದು, ಅದರಂತೆ ರಾಜ್ಯದ ಒಟ್ಟು 1710 ಗ್ರಾಮಗಳನ್ನು ಪ್ರವಾಹಪೀಡಿತ/ತುತ್ತಾಗುವ ಪ್ರದೇಶಗಳೆಂದು ಗುರುತಿಸಲಾಗಿದ್ದು, 758 ಗ್ರಾಮಗಳು ತೀವ್ರ ಪ್ರವಾಹ ಪರಿಸ್ಥಿತಿ ಹಾಗೂ 952 ಗ್ರಾಮಗಳಲ್ಲಿ ಮಧ್ಯಮ ಪ್ರವಾಹ ಪರಿಸ್ಥಿತಿಗೆ ತುತ್ತಾಗುವ ಗ್ರಾಮಗಳನ್ನು ವರ್ಗೀಕರಿಸಲಾಗಿದೆ.
ಹೀಗಾಗಿ ಮುಂಬರುವ ಸಾಂಭಾವ್ಯ ಅತಿವೃಷ್ಟಿಗೂ ಎಸ್ ಡಿಆರ್ ಎಫ್ ಹಣವನ್ನೇ ವಿನಿಯೋಗಿಸಬೇಕಾಗಿದೆ. ಸೀಮಿತ ಎಸ್ ಡಿಆರ್ ಎಫ್ ಹಣವನ್ನು ಕೋವಿಡ್ ಹಾಗೂ ಅತಿವೃಷ್ಟಿ ಎರಡಕ್ಕೂ ವಿನಿಯೋಗಿಸುವ ಅನಿವಾರ್ಯತೆ ಇದೆ. ಇದರಿಂದ ಹಣದ ಕೊರತೆ ಎದುರಾಗುವ ಆತಂಕ ಕಂದಾಯ ಇಲಾಖೆ ಅಧಿಕಾರಿಗಳನ್ನು ಕಾಡುತ್ತಿದೆ.
ರಾಜ್ಯದ SDRF ಲೆಕ್ಕಾಚಾರ ಹೀಗಿದೆ:
ಒಟ್ಟು ರಾಜ್ಯ ವಿಪತ್ತು ನಿರ್ವಹಣಾ ನಿಧಿಯ ಪ್ರಮಾಣ 80% ಆಗಿದೆ. ಉಳಿದಂತೆ 20% ರಾಜ್ಯ ವಿಪತ್ತು ಮಿಟಿಗೇಷನ್ ಫಂಡ್ (SDMF) ಮೀಸಲಿರಿಸಲಾಗಿದೆ. 80% SDRF ಹಂಚಿಕೆಯೊಳಗೆ ಮೂರು ಉಪ ಹಂಚಿಕೆಗಳಿವೆ. ಅದರಂತೆ ಸ್ಪಂದನೆ ಮತ್ತು ಪರಿಹಾರ 40%, ಮರು ನಿರ್ಮಾಣ ಶೇ 30ರಷ್ಟು ಹಾಗೂ ಸಿದ್ಧತೆ ಮತ್ತು ಸಾಮರ್ಥ್ಯ ವೃದ್ಧಿಗೆ ಶೇ 10ರಷ್ಟು ಉಪ ಹಂಚಿಕೆಯನ್ನು ಮಾಡಲಾಗಿದೆ.
ಇದರ ಪ್ರಕಾರ ರಾಜ್ಯ ಸರ್ಕಾರ SDRF ಹಣವನ್ನು ವಿನಿಯೋಗಿಸಬೇಕು ಎಂದು ಕಾಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. SDRF ನಡಿ ಶೇ 50 ಹಣವನ್ನು ಕೋವಿಡ್ ಗೆ ಬಳಸಬಹುದಾಗಿದೆ. ಅತಿವೃಷ್ಟಿ ಎದುರಿಸಲು ಮುಂದಿನ ದಿನಗಳಲ್ಲಿ ಹೆಚ್ಚಿನ SDRF ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಅದರಲ್ಲಿ ಮಳೆ ಅತಿವೃಷ್ಟಿಯನ್ನು ನಿರ್ವಹಿಸಲಾಗುತ್ತದೆ ಎಂದು ಮಂಜುನಾಥ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಂಚಿಕೆಯಾದ 1,054 ಕೋಟಿ ರೂ. SDRF ನಲ್ಲಿ ಕೇಂದ್ರದ ಪಾಲು ಶೇ 75ರಷ್ಟು, ರಾಜ್ಯದ ಪಾಲು ಶೇ25ರಷ್ಟು ಆಗಿದೆ. ಅದರಂತೆ ಕೇಂದ್ರ ಸರ್ಕಾರದ ಪಾಲಿನ 791 ಕೋಟಿ ರೂ. ರಾಜ್ಯಕ್ಕೆ ಕಂತುಗಳಲ್ಲಿ ಬರಲಿದೆ. 263 ಕೋಟಿ ರೂ. ರಾಜ್ಯದ ಪಾಲಾಗಿದೆ. ಮೇ ತಿಂಗಳಲ್ಲಿ ಕೇಂದ್ರ ತನ್ನ ಪಾಲಿನಲ್ಲಿ 316.4 ಕೋಟಿ ಕರ್ನಾಟಕಕ್ಕೆ ಬಿಡುಗಡೆ ಮಾಡಿದೆ. ಇನ್ನುಳಿದ 474.6 ಕೋಟಿ ರೂ. ಕೇಂದ್ರದ ಪಾಲು ರಾಜ್ಯಕ್ಕೆ ಬರಲಿದೆ.
ಇತರ ರಾಜ್ಯಗಳಿಗೆ ಹೋಲಿಸದರೆ ಕರ್ನಾಟಕಕ್ಕೆ ಬಿಡುಗಡೆ ಮಾಡಿದ ಮೊದಲ ಕಂತಿನ SDRF ಹಣ ಕಡಿಮೆ ಇದೆ. ಮಹಾರಾಷ್ಟ್ರಕ್ಕೆ 1,288 ಕೋಟಿ ರೂ. ಮೊದಲ ಕಂತಿನ ಎಸ್ ಡಿಆರ್ ಎಫ್ ಹಣ ಬಿಡುಗಡೆ ಮಾಡಿದ್ದರೆ, ಉತ್ತರ ಪ್ರದೇಶಕ್ಕೆ 773.20 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಕರ್ನಾಟಕಕ್ಕೆ ಬಿಡುಗಡೆ ಮಾಡಿರುವುದು ಕೇವಲ 316.4 ಕೋಟಿ ರೂ., ಕೇರಳಕ್ಕೆ 125.60 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.