ಬೆಂಗಳೂರು: ರಾಜ್ಯದಲ್ಲಿ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗಳ ಕೊರತೆ ಹಾಗೂ ಅವುಗಳಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ವರದಿ ನೀಡುವುದು ವಿಳಂಬವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡಿದ್ದು, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ರಿಟ್ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಳಿಕ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ರಾಜ್ಯದ ಎಲ್ಲ ವಲಯ ಐಜಿಪಿಗಳು, ಕಮಿಷನರ್ಗಳು, ರಾಜ್ಯ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ ನಿರ್ದೇಶಕ ಹಾಗೂ ಎಲ್ಲ ಪ್ರಾದೇಶಿಕ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ ಉಪನಿರ್ದೇಶಕರುಗಳಿಗೆ ನೋಟಿಸ್ ಜಾರಿ ಮಾಡಿತು.
ಇದೇ ವೇಳೆ ರಾಜ್ಯದಲ್ಲಿರುವ 6 ಫೊರೆನ್ಸಿಕ್ ಲ್ಯಾಬ್ಗಳ ಜತೆಗೆ ಅಗತ್ಯ ಸಂಖ್ಯೆಯ ಲ್ಯಾಬೊರೇಟರಿಗಳನ್ನು ಸ್ಥಾಪಿಸುವ, ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕುರಿತು ಮಾರ್ಚ್ 15ರೊಳಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ ನಿರ್ದೇಶಕರಿಗೆ ನಿರ್ದೇಶಿಸಿತು. ಅಲ್ಲದೇ, ಫೊರೆನ್ಸಿಕ್ ಸೈನ್ಸ್ ಲ್ಯಾಬ್ಗಳಲ್ಲಿ ಎಲ್ಲ ವಿಭಾಗಗಳೂ ಕಾರ್ಯನಿರ್ವಹಣೆ ಮಾಡುವಂತೆ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಹಾಗೂ ಲ್ಯಾಬ್ಗಳು ನೀಡುವ ವರದಿಗಳಿಗೆ ಸಮಯ ನಿಗದಿಪಡಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್ 18ಕ್ಕೆ ಮುಂದೂಡಿತು.
ಓದಿ:ಜಾತಿ ಸಮೀಕ್ಷೆ ವರದಿ ಇನ್ನೂ ಸಿಕ್ಕಿಲ್ಲ: ಹೈಕೋರ್ಟ್ಗೆ ಸರ್ಕಾರದ ಮಾಹಿತಿ
ಪ್ರಕರಣದ ಹಿನ್ನೆಲೆ: ಕ್ರಿಮಿನಲ್ ಅರ್ಜಿಯೊಂದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ 2020ರ ಡಿಸೆಂಬರ್ 22ರಂದು ನೀಡಿದ್ದ ಆದೇಶದಲ್ಲಿ ರಾಜ್ಯದಲ್ಲಿರುವ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗಳು ನಿಗದಿತ ಅವಧಿಯಲ್ಲಿ ವರದಿ ನೀಡದಿರುವ ಕಾರಣದಿಂದಾಗಿ ಕ್ರಿಮಿನಲ್ ಪ್ರಕರಣಗಳ ನ್ಯಾಯದಾನ ಪ್ರಕ್ರಿಯೆಗೆ ಸಮಸ್ಯೆಯಾಗುತ್ತಿರುವ ಕುರಿತು ಉಲ್ಲೇಖಿಸಿತ್ತು. ಅಲ್ಲದೇ ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುವಂತೆ ರಿಜಿಸ್ಟ್ರಿಗೆ ಮನವಿ ಮಾಡಿತ್ತು. ಅದರಂತೆ ಮುಖ್ಯ ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ಹೈಕೋರ್ಟ್ ಫೊರೆನ್ಸಿಕ್ ಲ್ಯಾಬ್ಗಳ ಕೊರತೆ ವಿಚಾರವಾಗಿ ಸ್ವಯಂಪ್ರೇರಿತ ರಿಟ್ ಅರ್ಜಿ ದಾಖಲಿಸಿಕೊಂಡಿದೆ.
ಬೆಂಗಳೂರಿನ ಮಡಿವಾಳದಲ್ಲಿ ಫೊರೆನ್ಸಿಕ್ ಸೈನ್ಸ್ ಲ್ಯಾಬ್ ನ ಕೇಂದ್ರ ಕಚೇರಿಯಿದ್ದು, ದಾವಣಗೆರೆ, ಬೆಳಗಾವಿ, ಕಲಬುರ್ಗಿ, ಮಂಗಳೂರು ಹಾಗೂ ಮೈಸೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು ಆರು ಲ್ಯಾಬ್ ಗಳಿವೆ. ಇವುಗಳಲ್ಲಿ ಡಿಎನ್ಎ, ನಾರ್ಕೋಟಿಕ್ಸ್, ಫೈರ್ ಆರ್ಮ್ಸ್, ದಾಖಲೆಗಳ ಪರೀಕ್ಷಾ ವಿಭಾಗ ಸೇರಿದಂತೆ 13 ಸೆಕ್ಷನ್ಗಳಿದ್ದು, ಅವಶ್ಯ ಸಂದರ್ಭಗಳಲ್ಲಿ ತಮ್ಮಲ್ಲಿಗೆ ಬರುವ ಸ್ಯಾಂಪಲ್ಗಳನ್ನು ಪರೀಕ್ಷಿಸಿ ವರದಿ ನೀಡುತ್ತವೆ. ಆದರೆ ಈ ಲ್ಯಾಬ್ಗಳಲ್ಲಿ ಸಿಬ್ಬಂದಿ ಹಾಗೂ ಸೌಕರ್ಯಗಳ ಕೊರತೆಯಿಂದಾಗಿ 11 ವಿಭಾಗಗಳು ಕೆಲಸವನ್ನೇ ಮಾಡುತ್ತಿಲ್ಲ. ರಾಜ್ಯದ ಎಲ್ಲ ಲ್ಯಾಬ್ಗಳಲ್ಲಿ 35,738 ಸ್ಯಾಂಪಲ್ಗಳು ಪರೀಕ್ಷೆಗೊಳಪಡದೆ ಬಾಕಿ ಉಳಿದಿರುವ ಪರಿಣಾಮ 6994 ಕ್ರಿಮಿನಲ್ ಪ್ರಕರಣಗಳ ವಿಚಾರಣೆಯೂ ವಿಳಂಬವಾಗಿದೆ. ಸ್ಯಾಂಪಲ್ ಬಂದಾಗ ವರದಿ ಕೊಡಲಿಕ್ಕೆ ಲ್ಯಾಬ್ ಗಳು ಅತಿಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ನಾರ್ಕೋಟಿಕ್ಸ್ ಗೆ ಒಂದು ವರ್ಷ, ಮೊಬೈಲ್, ಕಂಪ್ಯೂಟರ್, ಆಡಿಯೋ, ವೀಡಿಯೋ, ಡಿಎನ್ಎ ಹಾಗೂ ದಾಖಲೆಗಳನ್ನು ಪರೀಕ್ಷಿಸಿ ವರದಿ ನೀಡಲು ಸುಮಾರು ಒಂದೂವರೆ ವರ್ಷ ತೆಗೆದುಕೊಳ್ಳುತ್ತಿವೆ. ಇದು ಕ್ರಿಮಿನಲ್ ಪ್ರಕರಣಗಳ ನ್ಯಾಯದಾನ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು.