ಕರ್ನಾಟಕ

karnataka

ETV Bharat / state

ಹೆಚ್ಚುತ್ತಿರುವ ಕೊರೊನಾ ಆತಂಕ.. ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಗುರಿಯಾದ ಪೌರಕಾರ್ಮಿಕರು - coronavirus death toll

ಟಿಪ್ಪು ನಗರ ಹಾಗೂ ಪಾದರಾಯನಪುರದ ಪೌರಕಾರ್ಮಿಕರಿಗೆ ಒಂದು ಬಾರಿ ರ‍್ಯಾಂಡಮ್ ಟೆಸ್ಟ್​ ಮಾಡಿದಾಗ 30 ಪೌರಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇಂದು ವಸಂತನಗರದಲ್ಲಿ 9 ಜನರಿಗೆ ಪಾಸಿಟಿವ್ ಬಂದಿದೆ. ಉಳಿದಂತೆ ಎಲ್ಲಿಯೂ ಕೂಡಾ ರ‍್ಯಾಂಡಮ್ ಟೆಸ್ಟ್​ಗೆ ಪಾಲಿಕೆ ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ..

ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಗುರಿಯಾದ ಪೌರಕಾರ್ಮಿಕರು
ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಗುರಿಯಾದ ಪೌರಕಾರ್ಮಿಕರು

By

Published : Jul 18, 2020, 8:57 PM IST

Updated : Jul 18, 2020, 9:09 PM IST

ಬೆಂಗಳೂರು: ನಗರವನ್ನು ನೈರ್ಮಲ್ಯಗೊಳಿಸುವ ಕೊರೊನಾ ವಾರಿಯರ್​ಗಳಾದ ಪೌರಕಾರ್ಮಿಕರು ಜೀವದ ಹಂಗು ತೊರೆದು ಕೋವಿಡ್​ ಕೆಲಸದಲ್ಲಿ ಭಾಗಿಯಾಗಿದ್ದಾರೆ. ನಗರದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಆದರೂ ಪೌರ ಕಾರ್ಮಿಕರ ರಕ್ಷಣೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕೊಡಲು ಬಿಬಿಎಂಪಿ ನಿರ್ಲಕ್ಷ್ಯ ತೋರಿದೆ.

ಆರಂಭದಲ್ಲಿ ಕಂಟೇನ್‌ಮೆಂಟ್‌ ವಲಯಗಳ ಪೌರಕಾರ್ಮಿಕರಿಗೆ ಪಿಪಿಇ ಕಿಟ್ ಕೊಡಲಾಗುತ್ತಿತ್ತು. ಆದರೆ, ಎರಡು ತಿಂಗಳ ಬಳಿಕವೂ ಅದೇ ಪಿಪಿಇ ಕಿಟ್‌ನ ಪೌರಕಾರ್ಮಿಕರು ಮರುಬಳಕೆ‌ ಮಾಡುತ್ತಿದ್ದಾರೆ. ಉಳಿದೆಡೆ ಮಾಸ್ಕ್, ಗ್ಲೌಸ್‌ಗಳನ್ನು ತಿಂಗಳುಗಟ್ಟಲೆ ಮರುಬಳಕೆ ಮಾಡುತ್ತಿದ್ದಾರೆ. ಪೌರಕಾರ್ಮಿಕರು ಕೆಲಸದ ಅವಧಿಯನ್ನು 6 ರಿಂದ 10ಕ್ಕೆ ಕಡಿತ ಮಾಡಿ ಎಂದು ಮನವಿ ಮಾಡಿದರೂ ಸಹ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಬೆಳಗ್ಗೆ 6 ರಿಂದ 2 ಗಂಟೆಯವರೆಗೂ ರಸ್ತೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಹರಡುವಿಕೆ ವ್ಯಾಪಕವಾಗಿರುವುದರಿಂದ ಹಾಗೂ ಲಾಕ್‌​ಡೌನ್​ ಕಾರಣದಿಂದ ಹೊರಗಡೆ ಊಟ, ತಿಂಡಿ, ಶೌಚಾಲಯಕ್ಕೂ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಟಿಪ್ಪು ನಗರ ಹಾಗೂ ಪಾದರಾಯನಪುರದ ಪೌರಕಾರ್ಮಿಕರಿಗೆ ಒಂದು ಬಾರಿ ರ‍್ಯಾಂಡಮ್ ಟೆಸ್ಟ್​ ಮಾಡಿದಾಗ 30 ಪೌರ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇಂದು ವಸಂತನಗರದಲ್ಲಿ 9 ಜನರಿಗೆ ಪಾಸಿಟಿವ್ ಬಂದಿದೆ. ಉಳಿದಂತೆ ಎಲ್ಲಿಯೂ ಕೂಡಾ ರ‍್ಯಾಂಡಮ್ ಟೆಸ್ಟ್​ಗೆ ಪಾಲಿಕೆ ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಿವಾಜಿನಗರದ ಪೌರಕಾರ್ಮಿಕ ಮಹಿಳೆ, ವಿಶ್ವನಾಥ ನಾಗೇನಹಳ್ಳಿಯಲ್ಲಿ ಕೆಲಸ ಮಾಡಿ ಕೊರೊನಾ ಸೋಂಕಿಗೆ ತುತ್ತಾದಾಗ ಕನಿಷ್ಟ ಆಸ್ಪತ್ರೆಯ ಸೌಲಭ್ಯವನ್ನೂ ನೀಡದೆ ಬಿಬಿಎಂಪಿ ನಿರ್ಲಕ್ಷ್ಯ ತೋರಿದೆ. ಸಕಾಲಕ್ಕೆ ವೆಂಟಿಲೇಟರ್, ಆಸ್ಪತ್ರೆ ಸೌಲಭ್ಯ ಸಿಗದೆ 28 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಆದರೆ ಅವರ ಜೊತೆ ಕೆಲಸ ಮಾಡುತ್ತಿದ್ದ ಸಂಪರ್ಕಿತರನ್ನೂ ಬಿಬಿಎಂಪಿ ಕೊರೊನಾ ಟೆಸ್ಟ್​ಗೆ ಒಳಪಡಿಸಿಲ್ಲ. ಈಗಾಗಲೇ ಮಹಿಳೆಯ ತಮ್ಮನಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಮಾದಿಗ ದಂಡೋರ ಸಂಘಟನೆ-ಎಐಸಿಸಿಟಿಯು ಪ್ರತಿಭಟನೆ :

ಪೌರಕಾರ್ಮಿಕರಿಗೆ ಅಗತ್ಯ ಸೌಕರ್ಯ ಕೊಡುವಂತೆ, ಮೃತಪಟ್ಟವರಿಗೆ ವಿಮೆ ನೀಡುವಂತೆ ಒತ್ತಾಯಿಸಿ ಮಾದಿಗ ದಂಡೋರ ಸಮಿತಿ ಪ್ರತಿಭಟನೆ ನಡೆಸಿದೆ. ಎಐಸಿಸಿಟಿಯು ಸಂಘಟನೆ ವತಿಯಿಂದ ಮೌನ ಪ್ರಾರ್ಥನೆ ಹಾಗೂ ಮೊಂಬತ್ತಿ ದೀಪ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

ಬಿಬಿಎಂಪಿ ಪೌರಕಾರ್ಮಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ, ಬಾಬು ಮಾತನಾಡಿ, ನಗರದಲ್ಲಿ 50 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಏಳು ಜನ ಮೃತಪಟ್ಟಿದ್ದಾರೆ. ಪೌರಕಾರ್ಮಿಕರಿಗೆ ಪಿಪಿಇ ಕಿಟ್ ಕೊಟ್ಟಿಲ್ಲ. ಕನಿಷ್ಟ 50 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈವರೆಗೂ ರ‍್ಯಾಂಡಮ್ ಟೆಸ್ಟ್​ ಮಾಡಿಲ್ಲ. ಪೌರಕಾರ್ಮಿಕರ ಸಂಘದ ಕಟ್ಟಡದಲ್ಲಿ 10 ಕೊಠಡಿ ಇವೆ. ಅಲ್ಲೇ ಪ್ರತ್ಯೇಕ ಆಸ್ಪತ್ರೆ ಮಾಡಿ, ಟೆಸ್ಟ್ ಮಾಡಿ ಎಂದು ಹಲವಾರು ಬಾರಿ ಮನವಿ ಮಾಡಿದರೂ ಟೆಸ್ಟ್ ಮಾಡುತ್ತಿಲ್ಲ. ಪ್ರತ್ಯೇಕವಾಗಿ ಪೊಲೀಸರಿಗೆ ಟೆಸ್ಟ್ ಮಾಡುವ ರೀತಿ ಪೌರಕಾರ್ಮಿಕರಿಗೂ ರ‍್ಯಾಂಡಮ್ ಟೆಸ್ಟ್ ಮಾಡಬೇಕು.

ಪಿಪಿಇ ಕಿಟ್ ಕೂಡಾ ಕೊಡುತ್ತಿಲ್ಲ. ಸೀಲ್​ಡೌನ್ ಜಾಗದಲ್ಲಿ ಸೋಂಕು ತಗುಲುವ ಭೀತಿ ಇದ್ದರೂ ಕೆಲಸ ಮಾಡುತ್ತಿದ್ದಾರೆ. ಬರೀ ಮಾಸ್ಕ್, ಕೈಗವಸು ಕೊಟ್ಟು ಸುಮ್ಮನಾಗಿದ್ದಾರೆ. ಕೇವಲ ಒಂದು ಸಾರಿ ಕೊಟ್ಟು ಸುಮ್ಮನಾಗಿದೆ. ಈವರೆಗೆ ಏಳು ಜನ ಸತ್ತಿದ್ದಾರೆ. ಸೋಮವಾರದ ದಿನ ಆಯುಕ್ತರಿಗೆ, ಮುಖ್ಯಂಮತ್ರಿಗಳಿಗೆ ಮನವಿ ಪತ್ರವನ್ನೂ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ನಗರ ಜಿಲ್ಲಾಧ್ಯಕ್ಷ ದಾಸ್.ಸಿ ಮಾತನಾಡಿ, ಎಲ್ಲಾ ಪೌರಕಾರ್ಮಿಕರಿಗೆ, ಆಟೋ ಡ್ರೈವರ್ ಗಳಿಗೆ ಪಿಪಿಇ ಕಿಟ್ ಹಾಗೂ ರ‍್ಯಾಂಡಮ್ ಟೆಸ್ಟ್ ಮಾಡಿಸಬೇಕು. ಈ ಬಗ್ಗೆ ಈಗಾಗಲೇ ಪ್ರತಿಭಟನೆಯನ್ನೂ ನಡೆಸಿದ್ದೇವೆ. ಕೋವಿಡ್ ವಾರಿಯರ್ ಅಂತ ಕರೆದ ಪೌರಕಾರ್ಮಿಕರಿಗೆ ಕೊರೊನಾ ಬಂದು ತೀರಿ ಹೋಗಿದ್ದಾರೆ.‌ ಆಸ್ಪತ್ರೆ ಸೌಲಭ್ಯವೂ ಸಿಕ್ಕಿಲ್ಲ. ಅದಾದ ಬಳಿಕವೂ ಈವರೆಗೂ ರ‍್ಯಾಂಡಮ್ ಟೆಸ್ಟ್ ಕೂಡಾ ಮಾಡಿಲ್ಲ. ತೀರಿಕೊಂಡವರಿಗೆ ವಿಮೆ ಹಣವೂ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

Last Updated : Jul 18, 2020, 9:09 PM IST

ABOUT THE AUTHOR

...view details