ಕರ್ನಾಟಕ

karnataka

ETV Bharat / state

10 ಗಂಟೆ ಇದ್ದ ಕಾರ್ಮಿಕರ ಕೆಲಸದ ಅವಧಿ 8 ಗಂಟೆಗೆ ಇಳಿಕೆ: ಕೆಲಸಗಾರರು ನಿರಾಳ - ಕಾರ್ಮಿಕರು

ಲಾಕ್​ಡೌನ್​ ನಿಂದಾಗಿ ರಾಜ್ಯದಲ್ಲಿ 8 ಗಂಟೆಗಳ ಕಾಲ ಇದ್ದ ಕೆಲಸದ ಅವಧಿಯನ್ನು 10 ಗಂಟೆಗೆ ಏರಿಸಿದ್ದ ನಿರ್ಧಾರವನ್ನು ಇದೀಗ ಕೈ ಬಿಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್ ತಿಳಿಸಿದ್ದಾರೆ.

Shivaram hebbar
Shivaram hebbar

By

Published : Jun 12, 2020, 2:17 PM IST

ಬೆಂಗಳೂರು:ಇಂದಿನಿಂದಲೇ ಜಾರಿಗೆ ಬರುವಂತೆ ಮೊದಲಿದ್ದ ರೀತಿಯಲ್ಲಿಯೇ 8 ಗಂಟೆಗಳ ಕೆಲಸದ ಅವಧಿಯನ್ನು ಮುಂದುವರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.

ಇಂದು ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಗೆ ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ್ ಹೆಬ್ಬಾರ್‌ ಭೇಟಿ ನೀಡಿದರು. ಈ ವೇಳೆ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿ, ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಕಾರ್ಮಿಕ ಇಲಾಖೆ ರಾಜ್ಯದಲ್ಲಿ ವಾರಕ್ಕೆ 40 ಗಂಟೆಗಳಿದ್ದ ದುಡಿಯುವ ಸಮಯವನ್ನು 60 ಗಂಟೆಗಳಿಗೆ ಏರಿಸಿತ್ತು. ಕೆಲವು ರಾಜ್ಯಗಳಲ್ಲಿ ದಿನಕ್ಕೆ 8 ಗಂಟೆ ಇದ್ದ ಕೆಲಸದ ಅವಧಿಯನ್ನು 12ಗಂಟೆಗೆ ಏರಿಸಲಾಗಿತ್ತು. ಆದರೆ, ಕರ್ನಾಟಕದಲ್ಲಿ 10 ಗಂಟೆಗೆ ಹೆಚ್ಚಿಸಿತ್ತು. ಇದರಿಂದ ಕಾರ್ಮಿಕ ಮತ್ತು ಶ್ರಮಿಕರ ಶಕ್ತಿಗೆ ತೊಂದರೆಯಾಗುತ್ತಿದ್ದು, ಸರ್ಕಾರ ತನ್ನ ನಿರ್ಣಯವನ್ನು ಪುನರ್ ವಿಮರ್ಶೆ ಮಾಡಬೇಕು ಎಂದು ವಿವಿಧ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ. ಇದರ ಜೊತೆಗೆ ಯಾರೋ ಇಲಾಖೆಯ ತೀರ್ಮಾನ ವಿರೋಧಿಸಿ ಕೋರ್ಟ್‌ನಲ್ಲಿ ದೂರು ಸಹ ಸಲ್ಲಿಸಿದ್ದಾರೆ. ಆದರೆ, ಇದರ ವಿರುದ್ಧ ಸೊಮೋಟೋ ಬಳಸಿ ಸರ್ಕಾರವೇ ನ್ಯಾಯಾಲಯದಿಂದ ಪ್ರಕರಣ ಹಿಂಪಡೆದು ಕಾರ್ಮಿಕರ ದುಡಿಯುವ ಸಮಯದ ಚರ್ಚೆಗೆ ಕೊನೆ ಹಾಡಿದೆ ಎಂದರು.

ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಈ ಸಂಬಂಧ ನಾನು ಹಾಗೂ ಇಲಾಖೆಯ ಅಧಿಕಾರಿಗಳು ಚರ್ಚೆ ಮಾಡಿದ್ದೇವೆ. ಆದ್ದರಿಂದ ಕಾರ್ಮಿಕ ಇಲಾಖೆ ಇಂದಿನಿಂದ ಮೊದಲಿದ್ದ ರೀತಿಯಲ್ಲಿಯೇ 8 ಗಂಟೆಗಳ ಕೆಲಸದ ಅವಧಿಯನ್ನು ಮುಂದುವರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಹಲವು ದಿನಗಳಿಂದ ಕಾರ್ಮಿಕರ ಮನಸ್ಸಿನಲ್ಲಿ ಉದ್ಭವವಾಗಿದ್ದ ದುಗುಡ, ಸಂದೇಹ, ಮತ್ತು ಗೊಂದಲ ನಿವಾರಣೆಯಾಗಿದೆ ಎನ್ನುವ ವಿಶ್ವಾಸ ನನಗಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ABOUT THE AUTHOR

...view details