ಬೆಂಗಳೂರು:ಆರ್.ಆರ್. ನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮ ಹನುಮಂತರಾಯಪ್ಪ ಜ್ಯೋತಿಷಿಗಳ ಸಲಹೆ ಮೇರೆಗೆ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಕಾರ್ಯ ನಾಳೆ ನಡೆಯಬೇಕಿದೆ.
ಇದು ಈ ಹಿಂದೆಯೇ ಪಕ್ಷ ನಿರ್ಧರಿಸಿದ್ದ ದಿನಾಂಕ. ಆದರೆ, ಜ್ಯೋತಿಷಿಗಳ ಸಲಹೆ ಪ್ರಕಾರ ಇಂದು ನಾಮಪತ್ರ ಸಲ್ಲಿಕೆ ಮಾಡಿದರೆ. ಶ್ರೇಷ್ಠ ಎಂಬ ಕಾರಣದಿಂದ ಕುಸುಮಾ ಹನುಮಂತರಾಯಪ್ಪ ಹಿಂದೆ ಒಂದು ಸೆಟ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಿಗದಿಯಂತೆ ಇಂದು( ಬುಧವಾರ) ರಾಜ್ಯ ನಾಯಕರ ಜೊತೆ ತೆರಳಿ ಇನ್ನೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರು ಕೈಗೊಂಡ ನಿರ್ಧಾರವನ್ನು ಅಲ್ಲಗಳೆಯುವಂತಿಲ್ಲ. ಆದರೆ, ನಾಳೆ ತಾರಾಬಲ ಇಲ್ಲದ ಕಾರಣ ಜ್ಯೋತಿಷಿ ಸಲಹೆಯಂತೆ ಅನಿವಾರ್ಯವಾಗಿ ಇಂದು ಒಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿಶೇಷ ಎಂದರೆ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಲು ಸಲಹೆ ನೀಡಿದವರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ಡಾ.ಬಿ.ಪಿ ಆರಾಧ್ಯ. ಇಂದು 12 ಗಂಟೆಯಿಂದ 12.15 ನಿಮಿಷದ ಒಳಗೆ ನಾಮಪತ್ರ ಸಲ್ಲಿಸಲು ಸಲಹೆ ನೀಡಿದ್ದ ಜ್ಯೋತಿಷಿ ಆರಾಧ್ಯ ಅವರ ಸಲಹೆ ಮೇರೆಗೆ ಅವರ ಸಮ್ಮುಖದಲ್ಲೇ ಕುಸುಮ ಹನುಮಂತರಾಯಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.