ಬೆಂಗಳೂರು:ಆರ್.ಆರ್. ನಗರ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಲಿರುವ ಕುಸುಮಾ ಹನುಮಂತರಾಯಪ್ಪ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಿನ್ನೆ ಒಂದು ಬಾರಿ ನಾಮಪತ್ರ ಸಲ್ಲಿಸಿರುವ ಕುಸುಮಾ ಹನುಮಂತರಾಯಪ್ಪ ಇಂದು ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ತೆರಳಿ ಅಧಿಕೃತ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲು ನಾಗರಬಾವಿ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ತಂದೆ ಮತ್ತು ಕುಟುಂಬಸ್ಥರ ಜೊತೆ ಮಾತ್ರ ಆಗಮಿಸಿ ಪೂಜೆ ಸಲ್ಲಿಸಿದ ಕುಸುಮಾ ಅಲ್ಲಿಂದ ತೆರಳಿದ್ದಾರೆ.
ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕುಸುಮಾ ಹನುಮಂತರಾಯಪ್ಪ ಸಭೆ ಸೇರಿ ನಂತರ ನಾಮಪತ್ರ ಸಲ್ಲಿಕೆ: 10.30ಕ್ಕೆ ರಾಜರಾಜೇಶ್ವರಿ ನಗರದ ಬಿಜಿಎಸ್ ಗ್ಲೋಬಲ್ ಕಾಲೇಜಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರೆಲ್ಲ ಸಮಾವೇಶಗೊಳ್ಳಲಿದ್ದು, ಇಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಸೇರಿಸಿ ಚರ್ಚೆ ನಡೆಸಿ ಮಧ್ಯಾಹ್ನ 11.30ಕ್ಕೆ ರಾಜರಾಜೇಶ್ವರಿ ನಗರದ ಬಿಬಿಎಂಪಿ ಕಚೇರಿಗೆ ತೆರಳಿ ಕುಸುಮಾ ಹನುಮಂತರಾಯಪ್ಪ ನಾಮಪತ್ರ ಸಲ್ಲಿಸಲಿದ್ದಾರೆ.
ಇವರ ನಾಮಪತ್ರ ಸಲ್ಲಿಕೆ ಸಂದರ್ಭ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿರುತ್ತಾರೆ.