ಬೆಂಗಳೂರು: ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳ ಖಾತರಿ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಿ ರೈತರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆ ನಡೆಸುತ್ತಿದೆ. ಇದು ಕೇಂದ್ರ ಸರ್ಕಾರದ ರೈತ ವಿರೋಧಿ ಹುನ್ನಾರ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಇಂದು ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಆಗಸ್ಟ್ 22ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ರೈತರ ಕಿಸಾನ್ ಮಹಾ ಪಂಚಾಯತ್ ರ‍್ಯಾಲಿ ನಡೆಸಲಾಗುತ್ತಿದೆ. ಸಾವಿರಾರು ರೈತರು ರಾಜ್ಯದಿಂದ ಭಾಗವಹಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕೃಷಿ ಉತ್ಪನ್ನಗಳ ಖಾತರಿ ಬೆಂಬಲ ಬೆಲೆ ಕಾಯಿದೆ ಜಾರಿಯ ಬಗ್ಗೆ ರಚಿಸಿರುವ 26 ಜನರ ಸಮಿತಿಗೆ ಅಧ್ಯಕ್ಷರೇ ಇಲ್ಲ. ವರದಿ ನೀಡಲು ನಿರ್ದಿಷ್ಟ ಕಾಲಾವಧಿಯೂ ಇಲ್ಲ, ಬಹುತೇಕ ಸದಸ್ಯರು, ಸರ್ಕಾರದ ಪರವಾಗಿ ವಾದ ಮಾಡುವ ಜನರೇ ಆಗಿದ್ದಾರೆ. ಹೋರಾಟನಿರತ ರೈತರ ಬೇಡಿಕೆ ವಿರೋಧಿಸುತ್ತಿದ್ದವರೇ ಇದ್ದಾರೆ. ಒಂದು ವರ್ಷ ಹೋರಾಟ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ವತಿಯಿಂದ ಮೂರು ಜನ ಮಾತ್ರ ಸಮಿತಿಗೆ ಬನ್ನಿ ಎಂದು ಕರೆಯುತ್ತಿರುವುದು ರೈತರಿಗೆ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆಯಾಗಿದೆ. ಆದ್ದರಿಂದ ಸಮಿತಿಯ ರಚನೆಯನ್ನೇ ಬಹಿಷ್ಕರಿಸುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಅಂತಿಮ ಗಡುವು : ಕಬ್ಬಿನ ದರ ನಿಗದಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದು ಖಂಡಿಸಿ ರಾಜ್ಯ ಸರ್ಕಾರಕ್ಕೆ ಆಗಸ್ಟ್ 5 ರವರೆಗೆ ಅಂತಿಮ ಗಡುವು ನೀಡಿದ್ದೇವೆ. ನಿರ್ಲಕ್ಷ್ಯ ಮುಂದುವರಿದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಎಲ್ಲ ಕೃಷಿ ಉತ್ಪನ್ನಗಳಿಗೆ ಎಲ್ಲಾ ಪ್ರದೇಶಕ್ಕೂ ಎಲ್ಲಾ ಬೆಳೆಗಳಿಗೂ ಫಸಲ್ ಭೀಮಾ ಬೆಳೆವಿಮೆ ಜಾರಿಗೆ ತರಬೇಕು.
ರೈತರ ಕೃಷಿ ಸಾಲ ನೀತಿ ಬದಲಾವಣೆ ಮಾಡಬೇಕು. ರಾಜ್ಯ ಸರ್ಕಾರ ಮಳೆ ಹಾನಿಯ, ಬೆಳೆ ನಷ್ಟದ ಮಾನದಂಡ ಬದಲಾಯಿಸದೇ ಹೋದರೆ ರೈತರಿಗೆ ನ್ಯಾಯ ಸಿಗುವುದಿಲ್ಲ. ಮಳೆಹಾನಿ ಬೆಳೆ ನಷ್ಟ ಪರಿಹಾರ ಮಾನದಂಡವೂ ಎಸ್.ಡಿ.ಆರ್.ಎಫ್ ಬದಲಾಗಬೇಕು. ತಕ್ಷಣವೇ ರಾಜ್ಯಾದ್ಯಂತ ಮಳೆಹಾನಿ ಬೆಳೆನಷ್ಟ ಪರಿಹಾರ ರೈತರಿಗೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತರಿಗೆ ಸಹಾಯಧನ ನೀಡಿ ಜಿ.ಎಸ್.ಟಿ ತೆರಿಗೆ ವಸೂಲಿ : ರೈತರ ಕೃಷಿ ಉತ್ಪನ್ನಗಳ ಮೇಲೆ, ಬಡ ರೈತರ ಮಜ್ಜಿಗೆ, ಮೊಸರು, ಹಪ್ಪಳ, ರಸಗೊಬ್ಬರ ಕೀಟನಾಶಕಗ ಳಿಗೆ ಜಿ.ಎಸ್.ಟಿ ವಿಧಿಸುವುದು ಮತ್ತು ಕುದುರೆ ಜೂಜು ಬೆಟ್ಟಿಂಗ್, ಕ್ಯಾಸಿನೋಗಳಿಗೆ, ಪೆಟ್ರೋಲ್ ಡೀಸೆಲ್ಗಳಿಗೆ ವಿನಾಯಿತಿ ನೀಡುವುದು ಸಮಂಜಸವಲ್ಲ. ಸರ್ಕಾರ ರೈತರಿಗೆ ಸಹಾಯಧನ,ಪ್ರೋತ್ಸಾಹಧನ ನೀಡುತ್ತದೆ. ಮತ್ತೊಂದು ಕಡೆ ಜಿ.ಎಸ್.ಟಿ ತೆರಿಗೆ ವಿಧಿಸಿ ಹಣ ವಸೂಲಿ ಮಾಡುತ್ತಿದೆ ಎಂದು ದೂರಿದರು.
ಮಹಾ ಪಂಚಾಯತ್ ರ‍್ಯಾಲಿ : ಸರ್ಕಾರದ ದ್ವಂದ್ವ ನೀತಿ ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಷ್ಟ್ರೀಯ ಕಿಸಾನ್ ಮಹಾಸಂಘ, ದೆಹಲಿಯಲಿ ಆಗಸ್ಟ್ 22ರಂದು ಕಿಸಾನ್ ಮಹಾ ಪಂಚಾಯತ್ ರ‍್ಯಾಲಿ ನಡೆಸಲಿದ್ದೇವೆ. ಸರ್ಕಾರ ಇವೆಲ್ಲದರ ಕುರಿತು ಗಂಭೀರವಾಗಿ ಚಿಂತನೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವಿ.ಎಚ್ ನಾರಾಯಣರೆಡ್ಡಿ, ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ್, ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಯತಿರಾಜ್ ನಾಯ್ಡು, ಮಹದಾಯಿ ಹೋರಾಟ ಸಮಿತಿಯ, ರಾಷ್ಟ್ರೀಯ ಕಿಸಾನ್ ಸಂಘಟನೆಯ ವಕೀಲ ಭೀಮಯ್ಯ, ಎಂಜಿ ಸಿಂದಗಿ, ದೇವಕುಮಾರ್, ಹತ್ತಳ್ಳಿ ದೇವರಾಜ್, ಬಸವರಾಜ ಪಾಟೀಲ್, ಸುರೇಶ್ ಪಾಟೀಲ್, ಗುರುಸಿದ್ದಪ್ಪ, ಮಂಜುನಾಥ್, ತಮ್ಮಯ್ಯಪ್ಪ, ಬರದನಪುರ ನಾಗರಾಜ್, ರಾಮಚಂದ್ರ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಓದಿ :ಪ್ರವೀಣ್ ಹತ್ಯೆ: ರಾಜ್ಯಾದ್ಯಂತ ಬಿಜೆಪಿ ಮುಖಂಡರಿಂದ ರಾಜೀನಾಮೆ ಪರ್ವ