ಬೆಂಗಳೂರು: ಮುಖ್ಯಮಂತ್ರಿ ಗೊಂದಲ ಬಗೆಹರಿದಿದೆ. ಈಶ್ವರಪ್ಪರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು, ಆದರೆ ಸಿಎಂ ಸ್ಥಾನ ಬಸವರಾಜ ಬೊಮ್ಮಾಯಿಯವರಿಗೆ ಸಿಕ್ಕಿದೆ. ಸಂಪುಟದಲ್ಲಿ ಈಶ್ವರಪ್ಪರಿಗೆ ಸೂಕ್ತ ಸ್ಥಾನ ಕೊಡಬೇಕು, ವಲಸೆ ಬಂದಿರುವವ ಎಲ್ಲರನ್ನೂ ಪರಿಗಣಿಸಬೇಕು, ಯಾರನ್ನೂ ಕಡೆಗಣಿಸಬಾರದು ಎಂದು ಸರೂರಿನ ರೇವಣ ಸಿದ್ದೇಶ್ವರ ಗುರುಪೀಠದ ಶಾಂತಮಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಅಮರೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪರಿಗೆ ಬೀದರ್ನಿಂದ ಚಾಮರಾಜ ನಗರದವರೆಗೆ ಬೆಂಬಲಿಗರಿದ್ದಾರೆ. ಅವರು ಪಕ್ಷ ಕಟ್ಟಿದವರು, ಪಕ್ಷಕ್ಕಾಗಿ ತ್ಯಾಗ ಮಾಡಿದವರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದವರು. ನಿನ್ನೆಯ ನಿರ್ಧಾರ ವೈಯಕ್ತಿಕವಾದುದು, ಆದರೆ ಈಶ್ವರಪ್ಪ ಮುಖ್ಯಮಂತ್ರಿ ಆಗಿಲ್ಲ,ಈಗಾಗಲೇ ಮುಖ್ಯಮಂತ್ರಿ ಆಗಬೇಕಿತ್ತು ಹೀಗಾಗಿ ಈಗಲಾದರೂ ಉಪಮುಖ್ಯಮಂತ್ರಿ ಸ್ಥಾನ ಕೊಡಲಿ ಎಂದು ಹೈಕಮಾಂಡ್ಗೆ ಒತ್ತಾಯಿಸಿದರು.
ಒಬ್ಬ ವ್ಯಕ್ತಿಗೆ ನಾಲ್ಕು ಸಲ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ, ಈಶ್ವರಪ್ಪರಿಗೆ ಒಂದು ಸಲವಾದರೂ ಮುಖ್ಯಮಂತ್ರಿ ಮಾಡಬೇಕಿತ್ತು, ಈಶ್ವರಪ್ಪ ಪಕ್ಷ ಬಿಟ್ಟು ಹೋದವರಲ್ಲ, ಪಕ್ಷದಲ್ಲೇ ಇದ್ದವರು, ಇರುವವರು, ಪಕ್ಷದ ಮೇಲೆ ನಿಷ್ಠೆ ಇರುವವರು ಎಂದು ಹೇಳಿದರು.
ಅಥಣಿಯ ಕವಲುಗುಡ್ಡ ಗುರುಪೀಠದ ಅಮರೇಶ್ವರ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಉತ್ತರ ಕರ್ನಾಟಕದ ಸ್ವಾಮೀಜಿಗಳು, ಇಲ್ಲಿಗೆ ಬಂದಿರುವುದು ಈಶ್ವರಪ್ಪರಿಗೆ ಸೂಕ್ತ ಸ್ಥಾನ ಕೊಡಿ ಎಂದು ಕೇಳಲು. ಈಶ್ವರಪ್ಪ ಯಡಿಯೂರಪ್ಪ ಜೊತೆಗೆ ಪಕ್ಷ ಕಟ್ಟಿದವರು. ಅಂಥ ನಾಯಕನಿಗೆ ನಮ್ಮ ಎದುರು ಅನ್ಯಾಯ ಆಗಬಾರದು. ಈಶ್ವರಪ್ಪ ಹಿಂದುತ್ವಕ್ಕಾಗಿ, ಪಕ್ಷಕ್ಕಾಗಿ ನಿಷ್ಠೆ ಹೊಂದಿರುವರು. ಸೂಕ್ತ ಸ್ಥಾನಮಾನ ಕೊಡಲಿ ಎಂದು ವರಿಷ್ಠರ ಗಮನ ಸೆಳೆಯುತ್ತೇವೆ ಎಂದು ಹೇಳಿದ್ರು.
ಗುರುಪೀಠ ಮಖಣಾಪೂರದ ಸೋಮಲಿಂಗೇಶ್ವರ ಸ್ವಾಮೀಜಿ, ಸರೂರಿನ ರೇವಣಸಿದ್ದೇಶ್ವರ ಗುರುಪೀಠದ ಶಾಂತಮಯ ರೇವಣಸಿದ್ದೇಶ್ವರ ಸ್ವಾಮೀಜಿ, ಅಥಣಿಯ ಹಣಮಾಪೂರ ಕೌಲಗುಡ್ಡದ ಸಿದ್ಧಾಶ್ರಮ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಗಣಿ ಆಶ್ರಮದ ಚಿನ್ಮಯಾನಂದ ಸ್ವಾಮೀಜಿ, ಸುಕ್ಷೇತ್ರ ಹುಲಜಂತಿಯ ಮಾಳಿಂಗರಾಯ ಮಹಾರಾಜರು, ತುಮಕೂರಿನ ಬಿಂದು ಶೇಖರ ಸ್ವಾಮೀಜಿ, ನಾಗರಾಳದ ಅಮೋಘಸಿದ್ಧೇಶ್ವರ ಆಶ್ರಮದ ಲಕ್ಕಪ ಮಹಾರಾಜರು, ಸುಜ್ಞಾನ ಕುಟೀರ ಕೋಳಿಗುಡ್ಡದ ಸ್ವರೂಪಾನಂದ ಮಹಾಸ್ವಾಮಿಜಿಗಳು, ಲಕ್ಕನಾಯಕನ ಕೊಪ್ಪದ ಕೃಷ್ಣಾನಂದ ಮಹಾಸ್ವಾಮಿಜಿಗಳು, ಬಸವನ ಬಾಗೇವಾಡಿಯ ಮುತ್ತೇಶ್ವರ ಸ್ವಾಮೀಜಿ, ಢವಳಾವರದ ಸಿದ್ದಲಿಂಗ ಒಡೇಯರ, ಅರಕೇರಿಯ ಅಪ್ಪು ಒಡೇಯರ, ಆಲಬಾಳದ ಅಮಸಿದ್ದ ಒಡೇಯರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.