ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಕೋಲಾರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ಜೆಡಿಎಸ್‌ಗೆ ಬಿಜೆಪಿ ಬೆಂಬಲ ಎಂದು ವರದಿಯಾಗಿದೆ. ಯಾವುದೇ ಕಾರಣಕ್ಕೂ ಒಪ್ಪಂದ ಮಾಡಿಕೊಳ್ಳಲ್ಲ. ಬಿಜೆಪಿ ಜೊತೆ ಯಾವುದೇ ಚರ್ಚೆ ಆಗಿಲ್ಲ, ಮುಂದೆಯೂ ಆಗಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಕೋಲಾರದಲ್ಲೇ ನಿಲ್ಲಲಿ, ಬೇರೆ ಕಡೆ ನಿಲ್ಲಲಿ. ನಾವೇನು ಬಿಜೆಪಿ ಜೊತೆ ಸೇರಿ ಕುತಂತ್ರ ಮಾಡಬೇಕಿಲ್ಲ. ಬಿಜೆಪಿಯವರಂತೆ ಸಣ್ಣ ಮಟ್ಟದಲ್ಲಿ ಮಾತನಾಡಲ್ಲ. ನಾವು ಏನೇ ಮಾಡಿದರೂ ಸೋಲಿಸೋದು, ಗೆಲ್ಲಿಸೋದು ನಮ್ಮ ಕೈಯಲ್ಲಿ ಇಲ್ಲ. ನಮಗೆ ಕೋಲಾರದಲ್ಲಿ ಸಮಸ್ಯೆಯೇ ಇಲ್ಲ. ಪಕ್ಷದ ಅಭ್ಯರ್ಥಿ ಯಾರು ಅನ್ನೋದು ಈಗಾಗಲೇ ನಿರ್ಣಯ ಆಗಿದೆ. ಬೇರೆ ಪಕ್ಷದ ಜೊತೆ ಸೇರಿ ತಂತ್ರ ಮಾಡುವಂತದ್ದೇನು ಇಲ್ಲ ಎಂದರು.
ಸಿದ್ದರಾಮಯ್ಯರನ್ನು ಅವರ ಪಕ್ಷದವರೇ ಸೋಲಿಸುತ್ತಾರೆ: ಸಿದ್ದರಾಮಯ್ಯ ಆಗಲಿ, ಇನ್ನೊಬ್ಬರು ಬರಲಿ ನಮ್ಮ ಬಳಿ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಇದು ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಅಂತ ಅಲ್ಲ. ಎಲ್ಲರಂತೆ ನಾವು ವೀರಾವೇಶದಿಂದ ಮಾತನಾಡುವುದು ಪ್ರಯೋಜನ ಇಲ್ಲ. ಎಲ್ಲಿ ಏನು ಕೆಲಸ ಮಾಡಬೇಕೋ ಅದನ್ನು ಮಾಡುತ್ತೇವೆ. ಸಿದ್ದರಾಮಯ್ಯರನ್ನು ನಾವು ಏನು ಸೋಲಿಸಬೇಕಿಲ್ಲ, ಅವರ ಪಕ್ಷದವರೇ ಸೋಲಿಸುತ್ತಾರೆ ಎಂದು ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಹೆಚ್ಡಿಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಇನ್ನು, ಹೆಚ್ಡಿಕೆ ಸಿ ಎಂ ಇಬ್ರಾಹಿಂ ಭೇಟಿ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪಕ್ಷದ ಅಧ್ಯಕ್ಷರು ಹಾಗಾಗಿ ಸಿ ಎಂ ಇಬ್ರಾಹಿಂ ಅವರನ್ನು ಭೇಟಿ ಮಾಡಿದೆ. ಹಲವಾರು ವಿಚಾರಗಳ ಚರ್ಚೆ ಮಾಡಿದ್ದೇನೆ. ಪಕ್ಷದ ಸಂಘಟನೆ, ನವೆಂಬರ್ 18 ರಿಂದ ರಥಯಾತ್ರೆ ಪ್ರಾರಂಭ ಮಾಡಬೇಕು ಅಂತ ಇದ್ದೇವೆ. ಯಾವ ರೀತಿ ಮಾಡಬೇಕು ಅಂತ ಚರ್ಚಿಸಲು ಬಂದಿದ್ದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ವಿಚಾರವಾಗಿಯೂ ಮಾತನಾಡಿದ್ದೇನೆ ಎಂದು ಮಾಜಿ ಸಿಎಂ ತಿಳಿಸಿದರು.
ನಾವು ಸಹ ಪ್ರತಿ ಅಭ್ಯರ್ಥಿಗಳಿಗೆ ಮುಂದಿನ ಆರು ತಿಂಗಳಿಗೆ ಯಾವ ರೀತಿ ಚುನಾವಣಾ ತಂತ್ರ ಅಳವಡಿಸಬೇಕು. ಪ್ರತಿ ಬೂತ್ ಮಟ್ಟದಲ್ಲಿ ಯಾವ ರೀತಿ ಜವಾಬ್ದಾರಿ ನಿರ್ವಹಣೆ, ಪ್ರತಿ ಮನೆ ಮನೆಗೆ ಪಂಚರತ್ನ ಯೋಜನೆ ಮುಟ್ಟಿಸುವ ವಿಚಾರ. ಪ್ರತಿ ಅಭ್ಯರ್ಥಿ ನಿತ್ಯದ ಚಟುವಟಿಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಪಕ್ಷ ಸೈಲೆಂಟ್ ಆಗಿ ಕೆಲಸ ಮಾಡುತ್ತಿದೆ. ಅಧ್ಯಕ್ಷರನ್ನು ನಿಲ್ಲಿಸಬೇಕು ಅಂತ ಎಂಟತ್ತು ಕ್ಷೇತ್ರದಲ್ಲಿ ಒತ್ತಡ ಇದೆ. ನಾನು ಇಬ್ರಾಹಿಂ ಇಬ್ಬರೇ ಓಡಾಡಬೇಕಾಗಿದೆ. ಇಬ್ರಾಹಿಂ ಹಾಗೂ ನಾನು ರಾಜ್ಯ ಸುತ್ತಬೇಕು. ಜೆಡಿಎಸ್ ಸಂಪೂರ್ಣ ಪಡೆಯಲು ಕೆಲಸ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಶಾಲೆಗಳಿಗೆ ಕೇಸರಿ ಬಣ್ಣ ಹಚ್ಚುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಇವರು (ಬಿಜೆಪಿ) ಬಂದಿದ್ದಾರೆ ಕೇಸರಿ ಬಣ್ಣ ಹಚ್ಚುತ್ತಿದ್ದಾರೆ. ಮುಂದೆ ಬರುವವರು ಇನ್ನೊಂದು ಬಣ್ಣ ಹಚ್ಚುತ್ತಾರೆ. ಒಬ್ಬೊಬ್ಬರು ಒಂದೊಂದು ಬಣ್ಣ ಹಚ್ತಾರೆ. ಇವುಗಳನ್ನು ಬಿಟ್ಟು ಕಲಿಕೆಗೆ ಪ್ರಾಮುಖ್ಯತೆ ಕೊಡಬೇಕಿದೆ ಎಂದರು.
ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಅವರಿಗೆ ಒಡೆಯೋದೆ ಕೆಲಸ. ಬಿಜೆಪಿಯವರಿಗೆ ಕಟ್ಟಿ ಅಭ್ಯಾಸ ಇಲ್ಲ. ಜನ ಇವರ ಹೇಳಿಕೆಗಳನ್ನು ಗಮನಿಸಬೇಕು. ಜನಕ್ಕೆ ನೆರಳು ಕೊಡೋದು ಮುಖ್ಯ. ನೆರಳು ಕೊಡೋದು ಯಾವುದಾದ್ರೇನು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಇದನ್ನೂ ಓದಿ:224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವವನು ನಿಜವಾದ ನಾಯಕ: ಸಿದ್ದರಾಮಯ್ಯ