ಕರ್ನಾಟಕ

karnataka

ETV Bharat / state

ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ: ಮೋದಿಗೆ ಧನ್ಯವಾದ ಸಲ್ಲಿಸಿದ ಹೆಚ್​ಡಿಕೆ - ಮಾಜಿ ಸಿಎಂ ಹೆಚ್​ಡಿಕೆ

ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಹೆಚ್​.ಡಿ.ಕುಮಾರಸ್ವಾಮಿ, ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

PM Modi and HDK
ಪ್ರಧಾನಿ ಮೋದಿ ಹಾಗೂ ಹೆಚ್​ಡಿಕೆ

By ETV Bharat Karnataka Team

Published : Dec 29, 2023, 5:55 PM IST

ಬೆಂಗಳೂರು: ಮಿಲ್ಲಿಂಗ್‌ ಕೊಬ್ಬರಿಗೆ 300 ರೂ. ಹಾಗೂ ಉಂಡೆ ಕೊಬ್ಬರಿಗೆ 250 ರೂ. (ಪ್ರತಿ ಕ್ವಿಂಟಾಲ್‌ಗೆ) ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, "ಕೊಬ್ಬರಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಸಮಸ್ತ ರೈತರ ಪರವಾಗಿ ಕೃತಜ್ಞತೆಗಳು ಹಾಗೂ ಅಭಿನಂದನೆಗಳು" ಎಂದಿದ್ದಾರೆ.

"ಡಿಸೆಂಬರ್ 21ರಂದು ನವದೆಹಲಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕೊಬ್ಬರಿ ರೈತರ ಸಂಕಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಪ್ರಧಾನಿ ನಮ್ಮ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದರು" ಎಂದು ತಿಳಿಸಿದ್ದಾರೆ.

"ತೆಂಗು ಬೆಳೆಗಾರರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ನೆರವು ಬೇಕಿದೆ. ಮಧ್ಯವರ್ತಿಗಳು ಅವರನ್ನು ಕಿತ್ತು ತಿನ್ನುತ್ತಿದ್ದಾರೆ. ಇದು ಎಲ್ಲೆಡೆ ಕಂಡುಬರುತ್ತಿರುವ ನೈಜ ಚಿತ್ರಣ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ನಾಫೆಡ್ ಮೂಲಕವೇ ಕೊನೇ ಪಕ್ಷ ರಾಜ್ಯದಲ್ಲಿ 1.5 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಬೇಕು" ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿಗೆ ಹೆಚ್‌ಡಿಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ABOUT THE AUTHOR

...view details