ಕರ್ನಾಟಕ

karnataka

ETV Bharat / state

ಡಿಕೆ ಬ್ರದರ್ಸ್ ಮುಂದೆ ತೋಳೇರಿಸಿದಂತೆ ನನ್ನ ಹತ್ತಿರ ನಡೆಯಲ್ಲ : ಅಶ್ವತ್ಥನಾರಾಯಣಗೆ ಹೆಚ್​ಡಿಕೆ ಎಚ್ಚರಿಕೆ - etv bharat kannada

ಕುಮಾರಸ್ವಾಮಿ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವಿನ ಟ್ವೀಟ್​ ಸಮರ ಮುಂದುವರೆದಿದೆ. ಡಿಕೆ ಬ್ರದರ್​​ಗಳ ಮುಂದೆ ತೋಳೇರಿಸಿದಂತೆ ನನ್ನ ಹತ್ತಿರ ನಡೆಯಲ್ಲ. ನನ್ನ ಶಕ್ತಿ ಏನೆಂಬುದು ನಿಮಗೆ, ನಿಮ್ಮ ಪಕ್ಷಕ್ಕೆ ಚೆನ್ನಾಗಿ ಗೊತ್ತು ಎಂದು ಹೆಚ್​ಡಿಕೆ ಹೇಳಿದ್ದಾರೆ.

kumaraswamy-slams-minister-ashwath-narayan
ಡಿಕೆ ಬ್ರದರ್ಸ್ ಮುಂದೆ ತೋಳೆರಿಸಿದಂತೆ ನನ್ನ ಹತ್ತಿರ ನಡೆಯಲ್ಲ : ಅಶ್ವತ್ಥನಾರಾಯಣಗೆ ಹೆಚ್​ಡಿಕೆ ಸವಾಲು

By

Published : Aug 10, 2022, 5:35 PM IST

ಬೆಂಗಳೂರು:ಮಾಜಿ ಮುಖ್ಯಮಂತ್ರಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್​​​. ಅಶ್ವತ್ಥನಾರಾಯಣ ನಡುವಿನ ಟ್ವೀಟ್​ ಸಮರ ಮುಂದುವರೆದಿದೆ. 'ಹಲ್ಲು ಹಿಡಿದು ಮಾತನಾಡಿದರೆ ಉತ್ತಮ. ಡಿಕೆ ಬ್ರದರ್​​ಗಳ ಮುಂದೆ ತೋಳೆರಿಸಿದಂತೆ ನನ್ನ ಹತ್ತಿರ ನಡೆಯಲ್ಲ. ನನ್ನ ಶಕ್ತಿ ಏನೆಂಬುದು ನಿಮಗೆ, ನಿಮ್ಮ ಪಕ್ಷಕ್ಕೆ ಚೆನ್ನಾಗಿ ಗೊತ್ತು. ಈಗಲೂ ಸವಾಲು ಹಾಕುತ್ತಿದ್ದೇನೆ. ಕಲಾಪ ಕರೆದು ನೋಡಿ, ನಿಮ್ಮದೆಲ್ಲ ಬಿಚ್ಚಿಡುತ್ತೇನೆ. ಅನುಮಾನವೇ ಬೇಡ' ಹೆಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಅಶ್ವತ್ಥನಾರಾಯಣ ಅವರ ಟ್ವೀಟ್​​ಗೆ ತಿರುಗೇಟು ನೀಡಿರುವ ಅವರು, ಹೆಚ್​​ಡಿಕೆ, ಯಾರು? ಎಲ್ಲಿ? ಹೇಗೆ? ಫೇಲ್ಯೂರ್ ಆಗಿದ್ದಾರೆ ಎನ್ನುವುದು ನನಗೂ ಗೊತ್ತು. ಕಳೆದ 3 ವರ್ಷದಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುತ್ತಾ ಓತಲಾ ಹೊಡೆದವರು ಯಾರು? ಮುಕ್ಕಿಮುಕ್ಕಿ ಲೂಟಿ ಹೊಡೆದವರು ಯಾರು? ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಫೈವ್ ಸ್ಟಾರ್ ಹೋಟೆಲ್​ ವಿಚಾರ:ನಾನು ಫೈವ್ ಸ್ಟಾರ್ ಹೊಟೇಲಿನಲ್ಲಿ ಇದ್ದೆ, ಆದನ್ನು ನಾನೇ ಹೇಳಿದ್ದೇನೆ. ಇದೇನು ಹೊಸ ವಿಷಯ ಅಲ್ಲ. ನಿಮ್ಮ ಪಕ್ಷದ ಅಮಿತ್ ಶಾ, ಜೆ.ಪಿ. ನಡ್ಡಾ, ಅರುಣ್ ಸಿಂಗ್ ಎಲ್ಲರೂ ಬೆಂಗಳೂರಿಗೆ ಬಂದಾಗ ಅದೇ ಫೈವ್ ಸ್ಟಾರ್ ಹೊಟೇಲಿನಲ್ಲಿಯೇ ಇದ್ದರಲ್ಲವೆ? ಅವರು ಅಲ್ಲಿದ್ದಾಗ ನಿಮ್ಮ ಕಣ್ಣಿಗೆ ಪೊರೆ ಬಂದಿತ್ತಾ?. ಮೊನ್ನೆಯಷ್ಟೇ ಬಂದು ಹೋದ ಅಮಿತ್ ಶಾ ಅವರು ಯಾವ ಹೋಟೆಲ್​ನಲ್ಲಿ ಬಿಡಾರ ಹೂಡಿದ್ದರು? ನಿಮ್ಮ ನಾಯಕರೆಲ್ಲ ಬೆಂಗಳೂರಿಗೆ ಬಂದಾಗ ಕೃಷ್ಣಾ, ಅನುಗ್ರಹ ಅಥವಾ ಕಾವೇರಿ. ಅವರೇನು ಗುಡಿಸಿಲಿನಲ್ಲಿ ಮಲಗುತ್ತಾರಾ? ಹೇಳಿಯಪ್ಪ ಅಶ್ವತ್ಥನಾರಾಯಣ? ಎಂದು ಟೀಕಿಸಿದ್ದಾರೆ.

ಮಲ್ಲೇಶ್ವರ ಕರ್ಮಕಾಂಡ ಬಿಚ್ಚಿಡುತ್ತೇನೆ:ನಕಲಿ ಸರ್ಟಿಫಿಕೇಟ್ ಡೀಲರ್ ಯಾರು? ಬ್ಲ್ಯಾಕ್ ಮೇಲರ್ ಯಾರು? ಬಿಲ್ಡರ್ ಯಾರು? ಎನ್ನುವುದು ನನಗಿಂತ ನಿಮ್ಮ ಪಕ್ಷದ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ಬಿಲ್ ಮಾಡಿಕೊಳ್ಳಬೇಕಾದರೆ ಯಾರಿಗೆಲ್ಲ ಬ್ಲಾಕ್​​ಮೇಲ್ ಮಾಡಿದಿರಿ? ಅಕ್ರಮಗಳ ಗೂಡಿಗೆ ಯಾರಿಂದ ಬೆಂಕಿ ಹಾಕಿಸಿದಿರಿ? ಎನ್ನುವುದನ್ನೂ ಬಲ್ಲೆ. ಮಲ್ಲೇಶ್ವರದಲ್ಲಿ ನೀವು ನಡೆಸಿರುವ ಕರ್ಮಕಾಂಡವನ್ನು ಬಿಚ್ಚಿಡುತ್ತೇನೆ. ಕಲಾಪ ನಡೆಸಿ ನೋಡಿ. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ ಎನ್ನುವಂತೆ ಮಲ್ಲೇಶ್ವರದಲ್ಲಿ ನಿಮ್ಮ ಸದಾರಮೆ ಶೋಕಿ ಎಂಥದು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತಾಗಿದೆ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ನಾನು ಕಲಾಪ ನಡೆಸಿ ಎಂದಷ್ಟೇ ಕೇಳಿದೆ. ನಾನು ನಿಮ್ಮ ಹೆಸರೆತ್ತಲಿಲ್ಲ. ನಿಮಗೆ ಗೊತ್ತಿರಲಿ. ಆದರೆ, ನಿಮಗ್ಯಾಕೆ ಸಿಟ್ಟು ಬಂತೋ ನಾ ಕಾಣೆ. ಪಿಎಸ್ಐ ಅಕ್ರಮ, ಪ್ರಾಧ್ಯಾಪಕರ ನೇಮಕ ಅಕ್ರಮ, ಬಿಲ್ಲುಗಳ ಭಾಗವತ, ಮಹಾ ಡೀಲುಗಳ ಬಗ್ಗೆ ಚರ್ಚೆ ಮಾಡೋಣ. ನಾನು ತಯಾರಿದ್ದೇನೆ. ಕಲಾಪ ಕರೆಯಿರಿ ಎಂದು ಕುಮಾರಸ್ವಾಮಿ ಪಂಥಾಹ್ವನ ನೀಡಿದ್ದಾರೆ.

ಇದನ್ನೂ ಓದಿ:ಎಲ್ಲಿದ್ಯಪ್ಪ ಕುಮಾರಸ್ವಾಮಿ?: ಅಶ್ವತ್ಥ ನಾರಾಯಣ ಪ್ರಶ್ನೆಗೆ ಹೆಚ್​ಡಿಕೆ ಉತ್ತರವೇನು ಗೊತ್ತಾ?

ABOUT THE AUTHOR

...view details