ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​​ ಜೊತೆ ಮೈತ್ರಿ: ಪಾಠ ಕಲಿತಿದ್ದೇವೆ ಎಂದ ಕುಮಾರಸ್ವಾಮಿ - ಮಾಜಿ ಸಚಿವ ಡಿ.ಕೆ. ಶಿವಕುಮಾರ್

ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕ ಮತದಾರರ ಮೇಲೆ ಪ್ರಭಾವ ಬೀರಬಹುದು. ಇನ್ನು ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ. ಮೊದಲೇ ಮೈತ್ರಿ ಮಾಡಿಕೊಂಡು ಪಾಠ ಕಲಿತಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ-ಹೆಚ್​ಡಿಕೆ

By

Published : Oct 24, 2019, 6:33 PM IST

ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲವೆಂದು ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಈ ವಿಷಯದಲ್ಲಿ ಎರಡೂ ಪಕ್ಷಗಳು ಪಾಠ ಕಲಿತಿವೆ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕ ಮತದಾರರ ಮೇಲೆ ಪ್ರಭಾವ ಬೀರಬಹುದು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಈ ಬಿಜೆಪಿ ಸರ್ಕಾರ ಎಷ್ಟರಮಟ್ಟಿಗೆ ನಡೆದುಕೊಂಡಿದೆ ಅನ್ನೋದು ಕೂಡ ಮುಖ್ಯ. ಉಪ ಚುನಾವಣೆ ನಡೆಯುತ್ತದೋ ಅಥವಾ ಮಧ್ಯಂತರ ಚುನಾವಣೆಗೆ ಹೋಗಬೇಕಾ ಎನ್ನುವ ತೀರ್ಮಾನವನ್ನು ಬಿಜೆಪಿಯವರೇ ಮಾಡುತ್ತಾರೋ ಗೊತ್ತಿಲ್ಲ ಎಂದರು.

ಕಾಂಗ್ರೆಸ್ ಹಾಗೂ ನಮ್ಮ ನಡುವೆ ವೈರತ್ವ ಹಾಗೂ ಉತ್ತಮ ಸಂಬಂಧ ಇರಬಹುದು. ಆದರೆ, ಕಾರ್ಯಕರ್ತರ ಸಂಬಂಧದ ಅರಿವು ನಮಗೂ, ಕಾಂಗ್ರೆಸ್​ನವರಿಗೂ ಆಗಿದೆ. ಹಾಗಾಗಿ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ-ಹೆಚ್​ಡಿಕೆ

ಬಲವಂತವಾಗಿ ಸರ್ಕಾರ ರಚಿಸಿ, ಬಿಜೆಪಿ ಜನರ ನಿರೀಕ್ಷೆ ಹುಸಿಗೊಳಿಸಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅದರ ಬಿಸಿ ತಾಕಲಿದೆ. ಡಿಸೆಂಬರ್ 5ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯುವುದೇ ಸಂಶಯ ಇದೆ. ಯಾಕೆಂದರೆ ಚುನಾವಣಾ ಆಯೋಗವೇ ಕೇಂದ್ರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ ಎಂದು ದೂರಿದರು.

2013ರಲ್ಲಿ ಸ್ವತಂತ್ರವಾಗಿ ಕಾಂಗ್ರೆಸ್ ಸರ್ಕಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸಿದ್ದರಾಮಯ್ಯನವರು ಸಿಎಂ ಆಗುತ್ತಿರಲಿಲ್ಲ. ಯಡಿಯೂರಪ್ಪ ಅಂದು ಬಿಜೆಪಿಯಿಂದ ಸಿಡಿದೆದ್ದು ಕೆಜೆಪಿ ಪಕ್ಷ ಕಟ್ಟಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಮತ್ತೆ ನಮ್ಮದೇ ಸರ್ಕಾರ ಅಂತಿದ್ದಾರೆ. ಕ್ಷೀರ ಭಾಗ್ಯ, ಅನ್ನಭಾಗ್ಯ ಕೊಟ್ಟಿದ್ದೇವೆ ಅಂತಿದ್ದಾರೆ. ಅದೆಲ್ಲಾ ನಡೆಯಲ್ಲ. ಜೆಡಿಎಸ್ ಮುಗಿಸಿಬಿಟ್ಟಿದ್ದೀವಿ. ಸ್ವಾಭಿಮಾನಕ್ಕೆ ಮತ ಹಾಕಿ ಅಂತಾ ಹೇಳುತ್ತಿದ್ದಾರೆ. ಸ್ವ ಪ್ರತಿಷ್ಠೆಯಿಂದ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು ಎಂದು ತಿರುಗೇಟು ನೀಡಿದರು.

ಏಪ್ರಿಲ್​ಗೆ ಕಾಂಗ್ರೆಸ್ ಸರ್ಕಾರ ಬರುತ್ತದೆಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಯಾರ್ಯಾರ ಶಕ್ತಿ ಏನು ಎಂಬುದು ಗೊತ್ತಿದೆ. ನನ್ನ ಶಕ್ತಿ ನನಗೆ ಗೊತ್ತಿದೆ. ಒಂದು ವರ್ಗದ ಜನತೆಯ ಬಗ್ಗೆ ಕಂದಕ ಸೃಷ್ಟಿ ಮಾಡಿದವರು ಯಾರು ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್​ನಲ್ಲಿ ಜಾಮೀನು ಸಿಕ್ಕಿದೆ. ಅದು ಮುಂಚೆಯೇ ಸಿಗಬೇಕೀತ್ತು. ಐಟಿ, ಇಡಿ ಇಲಾಖೆಗಳು ತನಿಖೆಗೆ ಸಹಕಾರ ಕೊಟ್ಟಿಲ್ಲ ಎಂಬ ಮಾತು ರಾಜಕೀಯ ತಂತ್ರ. ಐಟಿ, ಇಡಿ ಮೇಲೆ ಒತ್ತಡ ಹೇರುವ ಕೆಲಸ ನಡೆಯುತ್ತಿದೆ. ನಾನು ಶಿವಕುಮಾರ್ ಅವರನ್ನು ಭೇಟಿಯಾಗಿ ಎರಡು ಮೂರು ದಿನಗಳಲ್ಲಿ ಜಾಮೀನು ಸಿಗುವುದಾಗಿ ಹೇಳಿದ್ದೆ ಎಂದು ಹೇಳಿದರು. ಇಡಿಗೆ ಮಾಹಿತಿ ಕೊಟ್ಟ ನಂತರವೂ ಅವರನ್ನು ಅನಗತ್ಯವಾಗಿ ಜೈಲಿನಲ್ಲಿ ಇಡಲಾಯಿತು. ಇದು ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಸಾಕ್ಷಿ ಎಂದು ದೂರಿದರು.

ABOUT THE AUTHOR

...view details