ಬೆಂಗಳೂರು : ಮನುಷ್ಯ ದೊಡ್ಡ ಹುದ್ದೆಗೆ ಹೋದಂತೆಲ್ಲ ಬುದ್ಧಿಮತ್ತೆ ಕೂಡ ಹೆಚ್ಚಾಗಬೇಕೇ ಹೊರತು ಗರ್ವ ಬರಬಾರದು. ಆದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಮಾತುಗಳು ಆ ಹಂತ ತಲುಪಿದಂತೆ ಭಾಸವಾಗುತ್ತದೆ. ಬಳಸುವ ಭಾಷೆ ಅದನ್ನು ಪ್ರತಿಧ್ವನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಸ್ಥಾನಕ್ಕೆ ಅಂದಿನ ಬಿಜೆಪಿ ಅಧ್ಯಕ್ಷ ಮತ್ತು ಈಗಿನ ಗೃಹ ಸಚಿವ ಅಮಿತ್ ಶಾ ಪುತ್ರ ರಾತ್ರೋರಾತ್ರಿ ಬಂದು ಕುಳಿತಿದ್ದಾರೆ. ಜಯ್ ಶಾ ಎಷ್ಟು ಸೆಂಚುರಿ, ಎಲ್ಲಿ ಬಾರಿಸಿದ್ದಾರೆ. ಸಿ.ಟಿ. ರವಿಗೆ ಅಲ್ಪಜ್ಞಾನ ಇರುವುದಕ್ಕೆ ನನಗೆ ಕನಿಕರ. ಜಯ್ ಶಾ ಪದವಿ ಕೂಡ ಅವರಪ್ಪನ ಬಳುವಳಿ ಎಂದು ಹೇಳುವ ಧೈರ್ಯ ಕೂಡ ರವಿಗೆ ಇಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಸಿ.ಟಿ. ರವಿಗೆ ಬಹುಶಃ ತನ್ನದೇ ಪಕ್ಷದಲ್ಲಿ ಹೆಮ್ಮರವಾಗುತ್ತಿರುವ ವಂಶವಾಹಿ ರಾಜಕಾರಣದ ವಿರುದ್ಧ ಕೋಪ ಇರಬೇಕು. ಅದಕ್ಕಾಗಿ ಈ ವಿಚಾರ ಕೆಣಕಿದ್ದಾರೆ ಎಂದೆನಿಸುತ್ತಿದೆ. ಸಿ.ಟಿ. ರವಿಯವರು ಮಂತ್ರಿ ಪದವಿ ಹೋದದ್ದಕ್ಕೆ ಅಥವಾ ಭವಿಷ್ಯದಲ್ಲಿ ವಂಶವಾಹಿ ರಾಜಕಾರಣದಲ್ಲಿ ಬೆಳೆದು, ಪಕ್ಷದಲ್ಲಿ ತನ್ನ ಬುಡಕತ್ತರಿಸುವ ಆತಂಕದಿಂದ ಮತ್ತು ಬಿಜೆಪಿಯಲ್ಲಿನ ವೈರುದ್ಯಗಳ ಬಗ್ಗೆ ಧ್ವನಿ ಎತ್ತಲು ಧೈರ್ಯ ಇಲ್ಲದೇ ಬೇರೆ ಪಕ್ಷಗಳ ವಂಶವಾಹಿ ಆಡಳಿತದ ಬಗ್ಗೆ ಪರೋಕ್ಷವಾಗಿ ಮಾತನಾಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.