ಬೆಂಗಳೂರು :ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಇಬ್ಬರೂ ಐಎಎಸ್ ಅಧಿಕಾರಿಗಳು ಇಷ್ಟೊಂದು ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸುತ್ತಿದ್ದಾರೆ. ಸರ್ಕಾರಕ್ಕೆ ಮುಜುಗರ ತರುತ್ತಿದ್ದರೂ ಸಹ ರಾಜ್ಯದ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಏನು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ
ಮಹಿಳಾ ಅಧಿಕಾರಿಗಳ ಜಗಳದಲ್ಲಿ ಜನಪ್ರತಿನಿಧಿಗಳು ಪರ-ವಿರೋಧದ ಹೇಳಿಕೆಗಳನ್ನು ನೀಡಿ ತಮ್ಮ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರ ದಿವ್ಯ ಮೌನಕ್ಕೆ ಶರಣಾಗಿದೆ.ಇದು ಮುಖ್ಯಮಂತ್ರಿಯ ದೌರ್ಬಲ್ಯವೋ, ಸರ್ಕಾರದ ಉನ್ನತ ಅಧಿಕಾರಿಗಳ ದೌರ್ಬಲ್ಯವೋ,ಯಾರನ್ನು ಓಲೈಸಲು ಅಥವಾ ದೌರ್ಬಲ್ಯ ಮುಚ್ಚಿಕೊಳ್ಳಲು ಸರ್ಕಾರ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಿದೆ.
ಸರ್ಕಾರಕ್ಕೇನಾದರೂ ಕಿಂಚಿತ್ತು ಮಾನ-ಮರ್ಯಾದೆ ಇದೆಯೇ..? ಹೀಗೆ, ಅಧಿಕಾರಿಗಳ ನಡುವೆ ಸಮನ್ವಯ ಇಲ್ಲದೆ ಪರಸ್ಪರ ಕಿತ್ತಾಡಿಕೊಂಡರೆ ಬೇರೆ ಬೇರೆ ಇಲಾಖೆಯಲ್ಲಿರುವವರು ನಾಳೆ ಇದೇ “ಹಾದಿ” ತುಳಿದರೆ ರಾಜ್ಯದ ಪರಿಸ್ಥಿತಿ ಏನಾಗಬಹುದು. ಕೂಡಲೇ ಸರ್ಕಾರ ಇಬ್ಬರೂ ಅಧಿಕಾರಿಗಳ “ಬಾಯಿಗೆ ಬೀಗ” ಹಾಕುವಂತಹ ಧೈರ್ಯವನ್ನಾದರೂ ತೋರಲಿ.
ಇಲ್ಲದಿದ್ದರೆ, ನಾಳೆ ರಾಷ್ಟ್ರಮಟ್ಟದಲ್ಲಿ ರಾಜ್ಯದ ಮಾನ-ಮರ್ಯಾದೆ ಹರಾಜಾದರೆ ಅದಕ್ಕೆ ಈಗಿನ ಸರ್ಕಾರ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ. ಪ್ರಜಾಪ್ರಭುತ್ವದ ಮೂರು ಮಂಗಗಳು ನಾಚುವಂತೆ ವರ್ತಿಸುತ್ತಿರುವ ಸರ್ಕಾರದ ಎಡಬಿಡಂಗಿತನ ಮತ್ತು ಮಹಾಮೌನ ಕಂಡು ಜನತೆ ಹಾದಿ ಬೀದಿಯಲ್ಲಿ ನಗುವಂತಾಗಿದೆ. ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ತಾಕತ್ತಿದ್ದರೆ ಬಹಿರಂಗ ಸಂಘರ್ಷಕ್ಕೆ ಕಡಿವಾಣ ಹಾಕಲಿ. ಇಲ್ಲ ಅಧಿಕಾರ ಬಿಟ್ಟು ತೊಲಗಲಿ ಎಂದು ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.