ಬೆಂಗಳೂರು: ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣೆ ಘೋಷಣೆ ಹಿನ್ನೆಲೆ ಚುನಾವಣಾ ಕಾರ್ಯತಂತ್ರ ರೂಪಿಸಲು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಇಂದು ತಮ್ಮ ಪಕ್ಷದ ಮುಖಂಡರ ಸಭೆ ಕರೆದಿದ್ದಾರೆ.
ಜೆಪಿನಗರದ ತಮ್ಮ ನಿವಾಸದಲ್ಲಿ ಕರೆದಿರುವ ಸಭೆಯಲ್ಲಿ ಆರ್‌ಆರ್‌ನಗರ ಕ್ಷೇತ್ರದ ಹಲವಾರು ಮುಖಂಡರು ಭಾಗವಹಿಸಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಹಲವು ಮುಖಂಡರು ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಎಲ್ಲವನ್ನೂ ಕುಮಾರಸ್ವಾಮಿ ಅವರು ಆಲಿಸಿ, ಮುಖಂಡರ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದಾರೆ.
ಈ ಉಪ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಎರಡೂ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ನಡುವೆ ಸಮಾಲೋಚನೆ ನಡೆಸಿರುವ ಹೆಚ್‌ಡಿಕೆ, ವಾರದೊಳಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪ್ರಕಟ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಎರಡೂ ಕ್ಷೇತ್ರಗಳು ಜೆಡಿಎಸ್‍ಗೆ ಪ್ರತಿಷ್ಠೆಯಾಗಿರುವುದರಿಂದ ಎಲ್ಲಾ ದೃಷ್ಟಿಕೋನದಿಂದಲೂ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರವನ್ನ ವರಿಷ್ಠರು ಹಾಕುತ್ತಿದ್ದಾರೆ.