ಬೆಂಗಳೂರು: ಬಿಜೆಪಿ ಸರ್ಕಾರ ಹಾಗೂ ಯಡಿಯೂರಪ್ಪ ವಿರುದ್ಧ ಟ್ವೀಟ್ ವಾರ್ ಮುಂದುವರೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಂಗಳೂರಿನಲ್ಲಿ ಆ'ರಕ್ಷಕ'ರಿಂದಲೇ ಪರಿಸ್ಥಿತಿಯನ್ನು ಪ್ರಕ್ಷುಬ್ಧಗೊಳಿಸಿದ ಸರ್ಕಾರ ಇಬ್ಬರು ಅಮಾಯಕರನ್ನು ಕೊಂದಿದ್ದೂ ಅಲ್ಲದೇ ಪರಿಹಾರವನ್ನೂ ವಂಚಿಸಿದೆ ಎಂದು ಕಿಡಿಕಾರಿದ್ದಾರೆ.
ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿ ಈಗ ಇಲ್ಲ ಎನ್ನುತ್ತಿರುವ ಬಿ.ಎಸ್.ಯಡಿಯೂರಪ್ಪ ವಚನ ಭ್ರಷ್ಟ, ಸುಳ್ಳುಗಾರ ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.
ಸತ್ತವರ ಹೆಸರು ಆರೋಪಿಗಳ ಪಟ್ಟಿಯಲ್ಲಿದೆ ಎಂದು ಪರಿಹಾರ ನೀಡದಿರಲು ಬಿಎಸ್ವೈ ನೀಡಿರುವ ಸಬೂಬು ಎಂಥ ಕ್ಷುಲ್ಲಕ? ಹೋರಾಟ ಅಪರಾಧವೇ? ಹೋರಾಟ ಸಂವಿಧಾನಬದ್ಧ ಹಕ್ಕು. ಹೋರಾಟಗಳನ್ನು ಹತ್ತಿಕ್ಕುವವರು ಸಂವಿಧಾನ ವಿರೋಧಿಗಳು. ದೇಶಭ್ರಷ್ಟರು ಎಂದು ದೂರಿದ್ದಾರೆ.
ಅಭಿಪ್ರಾಯ ಭೇದವನ್ನು ಬಿಜೆಪಿ ಸಹಿಸುವುದಿಲ್ಲ. ಹೋರಾಟಗಳನ್ನು, ಹೋರಾಟಗಾರರನ್ನು ಯಡಿಯೂರಪ್ಪ ಸಹಿಸುವುದಿಲ್ಲ. ಬಿಎಸ್ವೈ ನಿಜವಾಗಿಯೂ ಹೋರಾಟಗಾರರಾಗಿದ್ದರೆ ಪರಿಹಾರ ಮಂಜೂರು ಮಾಡಲಿ. ಇಲ್ಲವೇ ತಮ್ಮದು ಕೊಲೆಗಡುಕ ಸರ್ಕಾರ ಎಂದು ಒಪ್ಪಿಕೊಳ್ಳಲಿ ಎಂದಿದ್ದಾರೆ.
ಯಡಿಯೂರಪ್ಪನವರು ಮಂಗಳೂರಿಗೆ ಭೇಟಿ ನೀಡಿದ ದಿನದಂದೇ ಗೋಲಿಬಾರಿಗೆ ಬಲಿಯಾದವರು ಗಲಭೆಯಲ್ಲಿ ಭಾಗಿಯಾದವರು ಎಂದು ಪೊಲೀಸರು ಯಡಿಯೂರಪ್ಪನವರಿಗೆ ಮಾಹಿತಿ ನೀಡಿರಲಿಲ್ಲವೇ? ಅಂದು ಯಡಿಯೂರಪ್ಪನವರಿಗೆ ಆ ಎಡಿಟೆಡ್ ವಿಡಿಯೋ ತೋರಿಸಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನಾಲ್ಕು ದಿನ ಕಳೆದ ನಂತರ ಗೋಲಿಬಾರ್ಗೆ ಬಲಿಯಾದವರಿಬ್ಬರೂ ಗಲಭೆಕೋರರು ಎಂದು ಬಿಂಬಿಸಿರುವ ಉದ್ದೇಶವಾದರೂ ಏನು? ಇದನ್ನು ನೀವು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಜನತೆಗೆ ಉತ್ತರ ನೀಡಬೇಕಾಗುತ್ತದೆ. ಅಮಾಯಕರ ಮೇಲೆ ನಿಮ್ಮ ನೀಚ ಕೆಲಸದ ತಪ್ಪನ್ನು ಹೊರಿಸಿದರೆ ಮುಂದಿನ ದಿನಗಳಲ್ಲಿ ಪ್ರಾಯಶ್ಚಿತಕ್ಕೆ ತಯಾರಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಆಡಳಿತದಲ್ಲಿ ಜನರಿಗೆ, ಹೋರಾಟಗಾರರಿಗೆ ರಕ್ಷಣೆ ಇಲ್ಲ. ಎಷ್ಟೇ ಆದರೂ ಇದು ಅನರ್ಹ ಸರ್ಕಾರವಲ್ಲವೇ? ಎಂದು ವ್ಯಂಗ್ಯವಾಡಿದ್ದಾರೆ.