ಕರ್ನಾಟಕ

karnataka

ETV Bharat / state

HD Kumarswamy: ಗುತ್ತಿಗೆದಾರರಿಗೆ ಎಲ್​ಒಸಿ ಕೊಡಲು 5 ಪರ್ಸೆಂಟ್​ ಫಿಕ್ಸ್: ಕಾಂಗ್ರೆಸ್ ವಿರುದ್ಧ 45% ಕಮಿಷನ್​ ಆರೋಪ ಮಾಡಿದ ಕುಮಾರಸ್ವಾಮಿ

ಅಂದು ಬಿಜೆಪಿಯ ಮೇಲೆ ಆರೋಪ ಹೊರಿಸಿದ್ದ ಕಾಂಗ್ರೆಸ್​ ಈಗ ಅದನ್ನೇ ಮಾಡುತ್ತಿದೆ ಎಂದು ಹೆಚ್​ ಡಿ ಕುಮಾರಸ್ವಾಮಿ ದೂರಿದ್ದಾರೆ.

kumaraswamy-accused-congress-of-40-percent-plus-5-percent-collection
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

By

Published : Jun 10, 2023, 6:47 PM IST

Updated : Jun 10, 2023, 8:00 PM IST

ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ

ಬೆಂಗಳೂರು:ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಕಾಮಗಾರಿಗಳಿಗೆ ಎಲ್​ಒಸಿ (LOC) ಕೊಡಲು ರಾಜ್ಯ ಕಾಂಗ್ರೆಸ್ ಸರಕಾರ ಪರ್ಸಂಟೇಜ್ ಫಿಕ್ಸ್ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್, ಈಗ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡುತ್ತಿದೆ. ಹಿಂದಿನ ಸರ್ಕಾರದಲ್ಲಿ ಕೈಗೊಳ್ಳಲಾಗಿದ್ದ ಕಾಮಗಾರಿಗಳಿಗೆ LOC ಕೊಡುವುದಕ್ಕೆ ಈ ಸರ್ಕಾರದಲ್ಲಿ 5% ಫಿಕ್ಸ್ ಮಾಡಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರದಲ್ಲಿ ಪ್ರಾರಂಭಿಕ ಹಂತದಲ್ಲಿಯೇ ಅಧಿಕಾರಿಗಳ ಸಭೆ ನಡೆದಿದೆ. ಆ ಸಭೆಯಲ್ಲಿ ಅಧಿಕಾರಿಗಳಿಗೆ ಯಾವ ರೀತಿ ಪಾಠ ಮಾಡಿದ್ದಾರೆ ಇವರು ಎನ್ನುವ ಮಾಹಿತಿ ನನಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು ಕೆಲವು ಸೂಚನೆಗಳನ್ನು ಕೊಟ್ಟಿದ್ದಾರೆ. ನಾವು ಹೇಳಿದಂತೆ ಮಾತ್ರ ಕೇಳಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ಇದರ ಅರ್ಥ ಏನೆಂದರೆ, ನಮಗೆ ಬೇಕಾದ ಹಾಗೆ ಕೆಲಸ ಮಾಡಿ, ಇಲ್ಲವೇ ಹೊರಡಿ ಎನ್ನುವುದೇ ಈ ಫರ್ಮಾನಿನ ಒಳಾರ್ಥ ಎಂದು ದೂರಿದರು.

ಪ್ರಾರಂಭಿಕ ಹಂತದಲ್ಲಿ ಕಾಂಗ್ರೆಸ್ ಸರ್ಕಾರ ಕೆಲವು ನಿರ್ಧಾರ ತೆಗೆದುಕೊಂಡಿದೆ. ಹಿಂದಿನ ಟೆಂಡರ್​ಗಳು ಸೇರಿದಂತೆ ಅನೇಕ ಕಡೆ ಅನುದಾನ ತಡೆ ಹಿಡಿಯಲಾಗಿದೆ. ಬಿಜೆಪಿ ಸರ್ಕಾರ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿತ್ತು. ಕಳೆದ ಮೇ 6ರಂದು 675 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳ ಗುತ್ತಿಗೆದಾರರಿಗೆ ಎಲ್​ಒಸಿ ರಿಲೀಸ್ ಆಯಿತು. ಆ ಸಂದರ್ಭದಲ್ಲಿ ಒಬ್ಬ ಕಾಂಗ್ರೆಸ್ ಎಂಪಿ ಹೇಳಿದ್ದರಂತೆ, ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಮಾಡಬೇಡಿ, ನಮ್ಮ ಸರ್ಕಾರ ಬರುತ್ತದೆ ಅಂತ ಹೇಳಿದ್ದರಂತೆ. ಅವರು ಯಾಕೆ ಹೇಳಿದ್ದರು? ಆ ಎಂಪಿ ಯಾರು? ಎಂದು ಹೆಚ್​ಡಿಕೆ ಪ್ರಶ್ನಿಸಿದರು.

675 ಕೋಟಿ ಮೊತ್ತದ ಎಲ್​ಒಸಿ ಹಣ ಯಾಕೆ ಬಿಡುಗಡೆ ಆಗಲಿಲ್ಲ ಎನ್ನುವುದು ಅನುಮಾನಕ್ಕೆ ಕಾರಣ. ಈಗ LOC ಬಿಡುಗಡೆ ಆಗಬೇಕು ಅಂದರೆ 5 ಪರ್ಸೆಂಟ್ ಕೊಡಲೇಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. 40 ಪರ್ಸೆಂಟ್ ಜತೆಗೆ ಹೆಚ್ಚುವರಿಯಾಗಿ 5 ಪರ್ಸೆಂಟ್ ಕೊಟ್ರೆ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರಂತೆ. ಅಲ್ಲಿಗೆ ಇದು 45 ಪರ್ಸೆಂಟ್ ಸರ್ಕಾರ ಎಂದಾಯಿತಲ್ವೆ? ಆಗಿರುವ ಕಾಮಗಾರಿಗಳಿಗೆ ಪರ್ಸಂಟೇಜ್ ಕೇಳುತ್ತಿದ್ದಾರೆ, ಇವರು ಸತ್ಯ ಹರಿಶ್ಚಂದ್ರರು ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್: ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಿಗಳ ಪೋಸ್ಟಿಂಗ್​ಗೆ ರೇಟ್ ಫಿಕ್ಸ್ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ, ವಿದೇಶಿ ಪ್ರವಾಸದಲ್ಲಿರುವ ಸಚಿವರೊಬ್ಬರ ಇಲಾಖೆಗೆ ವರ್ಗ ಆಗಿರುವ ಹಿರಿಯ ಅಧಿಕಾರಿ ಒಬ್ಬರಿಗೆ ಅಧಿಕಾರ ವಹಿಸಿಕೊಳ್ಳಲು ಸ್ವತಃ ಸಚಿವರೇ ಅವಕಾಶ ನೀಡಿಲ್ಲ, ಯಾಕೆ? ಎಂದು ನೇರವಾಗಿ ಪ್ರಶ್ನಿಸಿದರು. ವಿದೇಶಿ ಪ್ರವಾಸದಲ್ಲಿರುವ ಆ ಸಚಿವರು ಯಾರು? ಆ ಸಚಿವರ ಗಮನಕ್ಕೆ ಬಾರದೆಯೇ ಅವರ ಇಲಾಖೆಗೆ ಪೋಸ್ಟಿಂಗ್ ಅದ ಆ ಅಧಿಕಾರಿ ಯಾರು? ಎನ್ನುವುದನ್ನು ಬಹಿರಂಗ ಮಾಡಲಿ. ಮೊದಲು ಇವರು ನನ್ನ ಬಗ್ಗೆ ಲಘುವಾಗಿ ಮಾತಾನಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.

ಸಿಎಂ ಅವರೇ ಆ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ಮಂತ್ರಿ ವಿದೇಶದಲ್ಲಿ ಇದ್ದಾರೆ. ಸಿಎಂ ಆದೇಶ ಮಾಡಿದ್ದರೂ, ನಾನು ಬರುವವರೆಗೂ ಅಧಿಕಾರ ತೆಗೆದುಕೊಳ್ಳಬೇಡಿ ಅಂತ ತಾಕೀತು ಮಾಡಿದ್ದಾರಂತೆ. ಹಾಗಾದರೆ ಎಷ್ಟು ಹಣ ಕೊಟ್ಟು ಬಂದರು ಈ ಅಧಿಕಾರಿ? ಈಗ 'ವರ್ಗಾವಣೆ ಜ್ಯೋತಿ' ಕಾರ್ಯಕ್ರಮ ನಡೆಯುತ್ತಿದೆ. ಈ ದಂಧೆ ಬಗ್ಗೆ ಏನು ಹೇಳ್ತಾರೆ ಇವರು. ಎಸಿಬಿ ದಾಳಿಗೆ ಒಳಗಾಗಿದ್ದ ಇನ್ನೊಬ್ಬ ಅಧಿಕಾರಿಯನ್ನು ಸಿಎಂ ಕಚೇರಿಯಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರದ ಬಗ್ಗೆ 40 ಪರ್ಸೆಂಟ್ ಬಗ್ಗೆ ಮಾತಾಡಿದ್ದರು ಇವರು. ಹಾದಿಬೀದಿಯಲ್ಲಿ ಜಾಗಟೆ ಹೊಡೆದುಕೊಂಡು ಪ್ರಚಾರ ಮಾಡಿದರು. ಈಗ ನೋಡಿದರ ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ಶುರು ಮಾಡಿಕೊಂಡಿದ್ದಾರೆ. 40 ಪರ್ಸೆಂಟ್ ಎಂದು ಪುಂಗಿ ಬಿಟ್ಟ ಇವರು ಆ ಆರೋಪವನ್ನು ಸಾಬೀತು ಮಾಡಿದ್ರಾ? ಎಂದು ಹೆಚ್​ಡಿಕೆ ಪ್ರಶ್ನಿಸಿದರು.

ರಾಜಕೀಯ ನಿವೃತ್ತಿಯ ಸವಾಲು: ನಾನು ಮುಖ್ಯಮಂತ್ರಿ ಆಗಿದ್ದಾಗ ಹಣ ಪಡೆದು ಪೋಸ್ಟಿಂಗ್ ಮಾಡಿದ್ದೆ ಎನ್ನುವುದನ್ನು ಸಾಬೀತು ಮಾಡಿದರೆ, ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದ ಅವರು, ಈಗ ಅಧಿಕಾರಿಗಳ ಪೋಸ್ಟಿಂಗ್​ಗೆ ಯಾರು, ಎಲ್ಲಿ ಕೂತು ರೇಟ್ ಫಿಕ್ಸ್ ಮಾಡುತ್ತಿದ್ದಾರೆ? ಎನ್ನುವುದನ್ನು ಅಧಿಕಾರಿಗಳೇ ಮಾತನಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಕಾಂಗ್ರೆಸ್ ಜೊತೆ ನಾನು ಸರ್ಕಾರ ಮಾಡಿದ್ದಾಗ ಕಾಂಗ್ರೆಸ್​ನವರು ಹೇಳಿದ ಮೇಲೆ ವರ್ಗಾವಣೆ ಮಾಡಬೇಕು ಎನ್ನುವ ಪರಿಸ್ಥಿತಿ ಇತ್ತು. 2018ರಲ್ಲಿ ಸಿಎಂ ಆಗಿದ್ದಾಗ ಅಮೆರಿಕಕ್ಕೆ ಹೋಗಿದ್ದೆ. ಆಗ ಶಾಸಕ ಭೈರತಿ ಬಸವರಾಜ್ ಮುನಿಸಿಕೊಂಡು ಬಿಜೆಪಿಗೆ ಹೋದರು. ನನ್ನ ಸಂಪುಟದಲ್ಲಿ ಸಚಿವರಾಗಿದ್ದ ಕಾಂಗ್ರೆಸ್ ನಾಯಕರೊಬ್ಬರು ಸೋಪ್ ಆ್ಯಂಡ್ ಡಿಟರ್ಜಂಟ್ ಕಾರ್ಖಾನೆಗೆ ಅಧಿಕಾರಿ ಒಬ್ಬರನ್ನು ವರ್ಗ ಮಾಡುವ ವಿಷಯದಲ್ಲಿ ನಡೆಸಿದ ಗಲಾಟೆ ನನ್ನ ಸರ್ಕಾರವನ್ನು ಬಲಿ ತೆಗೆದುಕೊಂಡಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ನಾವೇನು ಕಾಂಗ್ರೆಸ್ ಜೊತೆ ಹೋಗೋಕೆ ಆಗುತ್ತಾ? ಈಗ ಕಾಂಗ್ರೆಸ್​ನವರು ಬಹಳ ಎತ್ತರಕ್ಕೆ ಬೆಳೆದಿದ್ದಾರೆ: ಕುಮಾರಸ್ವಾಮಿ

Last Updated : Jun 10, 2023, 8:00 PM IST

ABOUT THE AUTHOR

...view details