ಬೆಂಗಳೂರು :ಇದು ಸ್ಯಾಂಪಲ್ಲೋ ಏನೋ ಗೊತ್ತಿಲ್ಲ. ಟ್ರೈಲರ್ ಬಿಡ್ತಾರೆ, ಮುಂದೆ ಪಿಕ್ಚರ್ ಬಿಡ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೂಚ್ಯವಾಗಿ ಶಿವಮೊಗ್ಗ ಘಟನೆ ಕುರಿತು ಹೇಳಿದರು.
ಶಿವಮೊಗ್ಗ ಯುವಕನ ಹತ್ಯೆ ಕುರಿತಂತೆ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯೆ ನೀಡಿರುವುದು.. ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಹತ್ಯೆ ಸಂಬಂಧ ಪ್ರತಿಕ್ರಿಯಿಸುತ್ತಾ, ಇದನ್ನ ನೋಡಿದರೆ ಪ್ರಾರಂಭಿಕ ಅನ್ನಿಸುತ್ತೆ. ಸರ್ಕಾರ ಇದನ್ನ ಮೊದಲೇ ಅರ್ಥ ಮಾಡಿಕೊಳ್ಳಬೇಕು. ಡಿಕೆಶಿ ಪ್ರಚೋದನೆ ಮಾಡುತ್ತಿದ್ದಾರೆ ಅನ್ನೋದು ಹೇಳ್ತೀರಾ. ಅದನ್ನ ಹೇಗೆ ಕಟ್ ಮಾಡಬೇಕು ಅಂತಾ ನಿಮಗೆ ಗೊತ್ತಿಲ್ವಾ?. ಯಾಕೆ ನೀವು ಸುಮ್ಮನಾಗಿದ್ದು ಎಂದು ಪ್ರಶ್ನಿಸಿದರು.
ನಮ್ಮ ಶಾಸಕರು ಪ್ರತಿಭಟನೆ ಮಾಡಿದ್ದಾರೆ. ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ್ದಾರೆ. ರಾಜ್ಯದ ಪ್ರಮುಖ ವಿಚಾರಗಳ ಚರ್ಚೆಗೆ ಅವಕಾಶ ಸಿಗಲಿಲ್ಲ. ಇವತ್ತು, ನಾಳೆ ಸದನ ಮುಂದೂಡಬಹುದು. ಬಜೆಟ್ ಅಧಿವೇಶನದವರೆಗೆ ಮುಂದೂಡಬಹುದು.
ಬೆಳಗಾವಿಯಲ್ಲೂ ಮತಾಂತರ ನಿಷೇಧ ಕಾಯ್ದೆ ತಂದರು. ಯಾವುದೇ ಸಮಸ್ಯೆ ಚರ್ಚೆಯಿಲ್ಲದೆ ಮುಕ್ತಾಯವಾಯಿತು. ಈಗಿನ ಸದನವೂ ನೀವೇ ನೋಡ್ತಿದ್ದೀರ ಎಂದರು. ಶಿಕ್ಷಣ ಕ್ಷೇತ್ರದ ಸಮಸ್ಯೆ ಬಗ್ಗೆ ಹಿಂದೆಯೇ ಹೇಳಿದ್ದೆ. ಅಮಾಯಕ ಮಕ್ಕಳ ಬಲಿಯಾಗಬಹುದು ಎಂದಿದ್ದೆ.
ಈಗ ಶಿವಮೊಗ್ಗದಲ್ಲಿ ಅಮಾಯಕ ಯುವಕನ ಬಲಿಯಾಗಿದೆ ಎಂದರು. ಮುಖಂಡರು ಆ ಯುವಕನ ಮನೆಗೆ ಹೋಗುವುದು. ಸಾಂತ್ವನ ಹೇಳುವುದು ಮಾಡ್ತಾರೆ. ಮೂರು ದಿನ ಆದಮೇಲೆ ಅತ್ತ ಯಾರೂ ಸುಳಿಯಲ್ಲ. ಆ ಅಮಾಯಕನ ಕುಟುಂಬದ ಬಗ್ಗೆ ಕೇಳುವವರಿರಲ್ಲ.
ಮಕ್ಕಳು ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ತಮ್ಮ ಕುಟುಂಬದ ಬಗ್ಗೆ ಯಾರೂ ನೋಡಲ್ಲ ಎಂಬುದನ್ನು ಮಕ್ಕಳು ಅರ್ಥ ಮಾಡಿಕೊಂಡರೆ ಸಾಕು ಎಂದು ತಿಳಿಸಿದರು.
ಇದನ್ನೂ ಓದಿ:ಕೆಪಿಎಎಸ್ಸಿ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ