ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಮಾರ ಕೃಪಾ ಪೂರ್ವದಲ್ಲಿನ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಿ ಮತ್ತೆ ಹೊಸ ಆದೇಶ ಹೊರಡಿಸಲಾಗಿದೆ.
ಈ ಮುಂಚೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ರೇಸ್ ವ್ಯೂ ಕಾಟೇಜ್ ನಿವಾಸವನ್ನು ಹಂಚಿಕೆ ಮಾಡಿ ಅದೇಶಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ತಮಗೆ ಕುಮಾರಕೃಪಾ ಪೂರ್ವದಲ್ಲಿನ ನಂ.1 ನಿವಾಸವನ್ನು ನೀಡುವಂತೆ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಈ ನಿಟ್ಟಿನಲ್ಲಿ ಇದೀಗ ಸಿಎಂ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಮನವಿಯಂತೆ ಕುಮಾರ ಕೃಪಾ ಪೂರ್ವದಲ್ಲಿನ ನಿವಾಸವನ್ನೇ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಮಾರ ಕೃಪಾ ನಿವಾಸ ಹಂಚಿಕೆ ಕುಮಾರ ಕೃಪಾ ಪೂರ್ವ ನಿವಾಸವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಂಚಿಕೆ ಮಾಡಲಾಗಿತ್ತು. ಇದೀಗ ನಿವಾಸ ಹಂಚಿಕೆಯನ್ನು ಪರಿಷ್ಕರಣೆ ಮಾಡಲಾಗಿದ್ದು, ರೇಸ್ ವ್ಯೂ ಕಾಟೇಜ್ ನಿವಾಸವನ್ನು ಸ್ಪೀಕರ್ ಕಾಗೇರಿಗೆ ಹಂಚಿಕೆ ಮಾಡಲಾಗಿದೆ. ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ರೇವಣ್ಣಗೆ ಕುಮಾರ ಕೃಪಾ ಪೂರ್ವ ನಂ.1 ನಿವಾಸವನ್ನು ಹಂಚಿಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಈ ಹಿಂದೆ ಪ್ರತಿಪಕ್ಷ ನಾಯಕಾರಗಿದ್ದಾಗಲೂ ಕುಮಾರ ಕೃಪಾ ಪೂರ್ವ ನಂ.1 ನಿವಾಸದಲ್ಲೇ ವಾಸವಾಗಿದ್ದರು. ಇದೀಗ ಮತ್ತೆ ಅವರಿಗೆ ಅದೇ ನಿವಾಸವನ್ನು ಹಂಚಿಕೆ ಮಾಡಲಾಗಿದೆ.
ಕೆಲ ದಿನಗಳಿಂದ ಸಿದ್ದರಾಮಯ್ಯ ಅವರಿಗೆ ನಿವಾಸ ಹಂಚಿಕೆ ಸಂಬಂಧ ಗೊಂದಲ ಮೂಡಿತ್ತು. ಇದೀಗ ಈ ಗೊಂದಲಕ್ಕೆ ತೆರೆ ಬಿದ್ದಿದೆ. ಇನ್ನು ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಿಂದ ಹೊಸದಾಗಿ ಹಂಚಿಕೆಯಾದ ಕುಮಾರ ಕೃಪಾ ಪೂರ್ವ ನಿವಾಸಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ.