ಬೆಂಗಳೂರು:ಡಾ.ರಾಜ್ ಕುಟುಂಬದ ಸಲಹೆಯಂತೆ ಮಗಳ ಮದುವೆಯನ್ನು ಮುಂದೂಡುವ ನಿರ್ಧಾರವನ್ನು ಕೈಬಿಡಲಾಗಿದೆ. ನಿಗದಿಯಂತೆ ನ. 10ರಂದು ವಿವಾಹ ಕಾರ್ಯಕ್ರಮ ನಡೆಯಲಿದೆ. ಅಪ್ಪು ಅಗಲಿಕೆಯ ನೋವಿನಲ್ಲೇ ಪುತ್ರಿಯ ಮದುವೆ ಮಾಡುತ್ತಿದ್ದೇನೆ ಎಂದು ನಟ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಭಾವುಕರಾಗಿ ನುಡಿದರು.
ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೊದಲು ಮೇ.30 ರಂದು ನಡೆಯಬೇಕಿದ್ದ ಮದುವೆಯನ್ನು ಕೋವಿಡ್ ಕಾರಣದಿಂದ ಕುಟುಂಬದವರೆಲ್ಲ ಸೇರಿಕೊಂಡು ಮುಂದೂಡಲಾಗಿತ್ತು. ಇದೀಗ ನ.10ಕ್ಕೆ ಮದುವೆ ನಿಗದಿಯಾಗಿದ್ದು, ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಮದುವೆಗೆ ಎಲ್ಲರಿಗೂ ಆಹ್ವಾನವನ್ನು ನೀಡಲಾಗಿದೆ ಎಂದರು.
ಇದೀಗ ನಟ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಅವರ ಅಗಲಿಕೆಯ ದುಃಖದ ಸಂದರ್ಭದಲ್ಲಿ ಪುತ್ರಿಯ ವಿವಾಹ ಮಾಡಲು ಮನಸ್ಸು ಬರುತ್ತಿಲ್ಲ. ಹೀಗಾಗಿ ಮುಹೂರ್ತವನ್ನು ಮುಂದೂಡಿಕೆ ಮಾಡುವ ಸಂಬಂಧ ಡಾ.ರಾಜ್ ಕುಟುಂಬದ ಜೊತೆ ಮಾತುಕತೆ ನಡೆಸಿದೆ. ಆದರೆ ಇದಕ್ಕೆ ರಾಜ್ ಕುಟುಂಬ ಒಪ್ಪಿಗೆ ನೀಡಲಿಲ್ಲ. ಈಗಾಗಲೇ ಹಾಲು-ತುಪ್ಪ ಕಾರ್ಯವಾಗಿದೆ. ಹಾಗಾಗಿ ವಿವಾಹ ಮುಹೂರ್ತವನ್ನು ಮುಂದೂಡಿಕೆ ಮಾಡುವುದು ಬೇಡ. ನಿಗದಿಯಾಗಿರುವಂತೆ ನ.10ರಂದು ಮದುವೆ ಕಾರ್ಯ ನೆರವೇರಿಸಿ ಎಂದು ಸಲಹೆ ನೀಡಿದ್ದಾರೆ. ಹಾಗಾಗಿ ಅವರ ಸಲಹೆಯಂತೆ ಪುತ್ರಿಯ ವಿವಾಹ ಕಾರ್ಯಕ್ರಮವನ್ನು ಅರಮನೆ ಮೈದಾನದಲ್ಲಿ ನಡೆಸುತ್ತಿದ್ದೇನೆ ಎಂದರು.
ಅಪ್ಪು ಅಗಲಿಕೆಯಿಂದ ಕೇವಲ ಬಂಗಾರಪ್ಪ ಕುಟುಂಬ ಮತ್ತು ರಾಜಕುಮಾರ್ ಕುಟುಂಬ ಅಷ್ಟೇ ಅಲ್ಲ. ಇಡೀ ನಾಡಿನ ಜನತೆ ಕಣ್ಣೀರ ಸಾಗರದಲ್ಲಿ ತುಂಬಿದೆ. ನಮ್ಮ ಮನೆಯ ಸದಸ್ಯ ಪುನೀತ್ ಅವರ ಅಗಲಿಕೆಯ ದುಃಖದ ಸನ್ನಿವೇಶ ನನ್ನ ಮಗಳ ಮದುವೆ ಸಂದರ್ಭದಲ್ಲಿ ಎದುರಾಗಿದೆ ಎಂದು ಭಾವುಕರಾದರು.