ಬೆಂಗಳೂರು: ಪಠ್ಯಪುಸ್ತಕಗಳಲ್ಲಿ ಬದಲಾವಣೆ ನಿರಂತರವಾಗಿ ನಡೆಯುತ್ತಿರುತ್ತದೆ. ನಾವು ಹಿಂದೆ ಓದಿರುವ ಪಠ್ಯ ಇಂದು ಇಲ್ಲ. ಹಾಗಾಗಿ ಸರ್ಕಾರದ ನಿಲುವನ್ನು ರಾಜಕೀಯಗೊಳಿಸದೇ ಮುಂದೆ ಹೋಗುವುದು ಒಳಿತು ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಅಭಿಪ್ರಾಯಪಟ್ಟರು.
ಶಾಸಕರ ಭವನದೆದುರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಓದಿದ್ದ ತಿರುಕನ ಕನಸು, ಚಂದಮಾನ ಕಥೆಗಳು ಇಂದಿನ ಪಠ್ಯದಲ್ಲಿಲ್ಲ. ಬದಲಾವಣೆ ನಿರಂತರವಾಗಿ ನಡೆಯಲಿದೆ. ಹಾಗಾಗಿ ಟಿಪ್ಪು ವಿಷಯವನ್ನು ಪಠ್ಯದಿಂದ ತೆಗೆದುಹಾಕಲಾಗುತ್ತದೆ. ಸ್ವಾಮಿ ವಿವೇಕಾನಂದರ ಪಠ್ಯ ಹಾಕಿದ್ದಾರೆ, ರಾಮಕೃಷ್ಣ ಪರಮಹಂಸ ಪಠ್ಯ ಹಾಕಿದ್ದಾರೆ ಎನ್ನುವುದು ಸರಿಯಲ್ಲ. ಇದನ್ನು ನಾವೆಲ್ಲಾ ಓದಿದ್ದೇವೆ. ಇದನ್ನೇ ಈಗ ಕೇಸರೀಕರಣ ಎಂದು ಆರೋಪಿಸುತ್ತಾರೆ. ಇಂತಹ ವಿಷಯವನ್ನೆಲ್ಲಾ ಬಿಟ್ಟು ಮುಂದೆ ಹೋಗುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದ್ರು.