ಬೆಂಗಳೂರು: ಈ ಬಾರಿಯ ವಿಶ್ವವಿಖ್ಯಾತ ದಸರಾ ವೈಭವಕ್ಕೆ ಮತ್ತಷ್ಟು ಮೆರುಗು ನೀಡಲು ಮುಂದಾಗಿರುವ ಕೆಎಸ್‌ಆರ್‌ಟಿಸಿ, ಪ್ರಯಾಣಿಕರಿಗೆ ದಸರಾ ಪ್ಯಾಕೇಜ್ ಟೂರ್ ಸ್ಪರ್ಧೆ ಆಯೋಜನೆ ಮಾಡಿ ಪ್ರವಾಸಕ್ಕೆ ಉತ್ತೇಜನ ನೀಡುತ್ತಿದೆ. ಪ್ರವಾಸದ ಅನುಭವದ ಬಗ್ಗೆ ಅತ್ಯುತ್ತಮ ಅಭಿವ್ಯತ್ತಿ ವಿಡಿಯೋ ನೀಡಿದವರಿಗೆ ಬಹುಮಾನವನ್ನೂ ಘೋಷಿಸಿದೆ.
ಈ ಹಿಂದೆ ಪ್ಲಾಸ್ಟಿಕ್ ನಿಷೇಧ ಮಾಡಿದ್ದ ವೇಳೆ ಮೈ ಓನ್ ವಾಟರ್ ಬಾಟಲ್ ಸ್ಪರ್ಧೆ ಆಯೋಜಿಸಿದ್ದ ಕೆಎಸ್ಆರ್‌ಟಿಸಿ ಹವಾನಿಯಂತ್ರಿತ ಬಸ್ಗಳಲ್ಲಿ ಲೋಹದ ನೀರಿನ ಬಾಟೆಲ್ ಜೊತೆ ಸೆಲ್ಫಿ ತೆಗೆದು ಕಳಿಸುವ ಸ್ಪರ್ಧೆ ಮಾಡಿತ್ತು. ಅತ್ಯುತ್ತಮ ಸೆಲ್ಫಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಒಂದು ಬಾರಿಗೆ ಉಚಿತ ಪ್ರಯಾಣ ಮಾಡುವ ಅವಕಾಶ ಗೆಲ್ಲಿ ಎನ್ನುವ ಘೋಷಣೆ ಮಾಡಿತ್ತು. ಇದೀಗ, ನಮ್ಮೊಡನೆ ನಿಮ್ಮ ಪ್ರವಾಸ, ಒಂದು ಸುಂದರ ಅನುಭವ 'ಕೆಎಸ್‌ಆರ್‌ಟಿಸಿಯೊಂದಿಗೆದಸರಾ' ಹೆಸರಿನಲ್ಲಿ ಕೆಎಸ್‌ಆರ್‌ಟಿಸಿ ವಿಶೇಷ ಪ್ಯಾಕೇಜ್ ಪ್ರವಾಸ ಸ್ಪರ್ಧೆ ಆಯೋಜನೆ ಮಾಡಿದೆ.
ರಾಜ್ಯ ಸಾರಿಗೆಯಲ್ಲಿ ಮೈಸೂರು, ಮಂಗಳೂರು ಪ್ಯಾಕೇಜ್ ಟೂರ್ ಮೂಲಕ ಪ್ರಯಾಣಿಕರು ಕೈಗೊಂಡ ಪ್ರವಾಸದ ಅನುಭವವನ್ನು ಹಂಚಿಕೊಳ್ಳಬೇಕು, ಈ ಒಂದು ನಿಮಿಷದ ವಿಡಿಯೊ ಸಾರಿಗೆ ಪ್ಯಾಕೇಜ್ ಪ್ರವಾಸದಲ್ಲಿನ ನಿಮ್ಮ ನೈಜ ಪ್ರಯಾಣದ ಅನುಭವದ ದೃಶ್ಯಗಳನ್ನು ಒಳಗೊಂಡಿರಬೇಕು. ಅಂದರೆ ವಿಡಿಯೊ ಪ್ರಯಾಣದ ಸಂದರ್ಭದಲ್ಲೇ ಮಾಡಿದ್ದಾಗಿರಬೇಕು. ನೀವು ಈ ವಿಡಿಯೊವನ್ನು ಫೇಸ್‌ಬುಕ್ ಮತ್ತು ಟ್ವಿಟರ್ ಎರಡರಲ್ಲೂ #DasarawithKSRTC ಎಂಬ ಹ್ಯಾಷ್‌ಟ್ಯಾಗ್‌ಗಳ ಜೊತೆ ಪೋಸ್ಟ್ ಮಾಡಿರಬೇಕು.
ಹಾಗೇ ಕೆಎಸ್‌ಆರ್‌ಟಿಸಿಯ ಅಧಿಕೃತ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಿಗೆ ಟ್ಯಾಗ್ ಮಾಡಬೇಕು. ಅತ್ಯಧಿಕ ಲೈಕ್ಸ್ ಪಡೆದ ಮತ್ತು ಸಕಾರಾತ್ಮಕ ಅಭಿವ್ಯಕ್ತಿಯ ವಿಡಿಯೊವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದ್ದಾರೆ.