ಬೆಂಗಳೂರು:ಕೊರೊನಾದಿಂದ ಎಲ್ಲಾ ಇಲಾಖೆಗಳು ಸಾಕಷ್ಟು ನಷ್ಟ ಅನುಭವಿಸಿದ್ದು, ಇದಕ್ಕೆ ಸಾರಿಗೆ ಇಲಾಖೆ ಹೊರತಾಗಿಲ್ಲ. ಪ್ರಯಾಣಿಕರಿಲ್ಲದೆ ಇಲಾಖೆಯು ಸಾಕಷ್ಟು ನಷ್ಟ ಅನುಭವಿಸಿದೆ. ಈ ಸಂಬಂಧ ಮುಂದಿನ ಆದೇಶದವರೆಗೆ ಎಲ್ಲಾ ರೀತಿಯ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವ ಕ್ರಮಕ್ಕೆ ಇಲಾಖೆ ಮುಂದಾಗಿದೆ.
ಈ ಕುರಿತು ಇಂದು ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ನಿಗಮದ ಇಲಾಖಾ ಮುಖ್ಯಸ್ಥರು, 17 ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ವರ್ಚುವಲ್ ಪರಿಶೀಲನಾ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಲಾಕ್ಡೌನ್ ಮೊದಲು 8,200 ಬಸ್ಸುಗಳು ಸಂಚರಿಸುತ್ತಿದ್ದವು. ಲಾಕ್ ಡೌನ್ ನಂತರ 5,100 ಬಸ್ಸುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ. 30 ಲಕ್ಷ ಪ್ರಯಾಣಿಕರು ಓಡಾಡುವ ಕಡೆ 10 ಲಕ್ಷ ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದು, ಅದರಲ್ಲಿಯೂ ಪ್ರಯಾಣಿಕರು 50-100ಕಿ.ಮೀ. ಒಳಗೆ ಮಾತ್ರ ಪ್ರಯಾಣಿಸುತ್ತಿದ್ದಾರೆ. ಇದರಿಂದ ಇಲಾಖೆಗೆ ಸಾಕಷ್ಟು ನಷ್ಟ ಸಂಭವಿಸಿದೆ.
ನಷ್ಟ ಅನುಭವಿಸುತ್ತಿರುವ ಈ ಸಮಯದಲ್ಲಿ ಮುಂದಿನ ಆದೇಶದವರೆಗೆ ನೇಮಕಾತಿ ತಡೆಹಿಡಿಯುವುದು. ಒಪ್ಪಂದದ ಮೇರೆಗೆ ಬಸ್ಸುಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ನೀಡುವುದು. ನಿಗಮದ ತರಬೇತಿ ಕೇಂದ್ರಗಳಲ್ಲಿ ಎಲ್ಲಾ ಮಾದರಿಯ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವುದು. ಲಾಭ-ನಷ್ಟದ ಆಧಾರದಲ್ಲಿ ಸಾರಿಗೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಸಹ ನಿಗಮವೂ ಉಳಿಯಬೇಕಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಸಾರಿಗೆ ಆದಾಯ ಹೊರತುಪಡಿಸಿ ಇತರೆ ಆದಾಯವನ್ನು ಹೆಚ್ಚಿಸಬೇಕು. ಯಾವುದೇ ರೀತಿಯ ದುಂದುವೆಚ್ಚಕ್ಕೆ ಅವಕಾಶ ಕೊಡದೆ ಹಾಗೂ ಸೋರಿಕೆಯಾಗುವುದನ್ನು ತಡೆಗಟ್ಟುವಂತೆ ಸೂಚನೆ ನೀಡಿದರು.