ಕರ್ನಾಟಕ

karnataka

ETV Bharat / state

Shakti Scheme: ಮಹಿಳೆಯರಿಗೆ ಟ್ಯಾಪ್ & ಟ್ರಾವೆಲ್ ಸ್ಮಾರ್ಟ್ ಕಾರ್ಡ್ ವಿತರಿಸಲು ಕೆಎಸ್​ಆರ್​ಟಿಸಿ ಚಿಂತನೆ - Freebie schemes

ಶಕ್ತಿ ಯೋಜನೆಗೆ ಟ್ಯಾಪ್ ಆ್ಯಂಡ್ ಟ್ರಾವೆಲ್ ತಂತ್ರಜ್ಞಾನದ ಸ್ಮಾರ್ಟ್ ಕಾರ್ಡ್ ಅಳವಡಿಸುವ ಕುರಿತು ಸಾರಿಗೆ ಸಂಸ್ಥೆ ಚಿಂತನೆ ನಡೆಸಿದೆ. ನಮ್ಮ ಮೆಟ್ರೋ ಮಾದರಿಯಲ್ಲಿ ಟ್ಯಾಪ್ ಸ್ಮಾರ್ಟ್ ಕಾರ್ಡ್ ರೀತಿಯ ವ್ಯವಸ್ಥೆ ಇದು.

Shakti Scheme smart card ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್
ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್

By

Published : Jul 17, 2023, 7:30 AM IST

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾರಿ ಸ್ಪಂದನೆ ದೊರೆಯುತ್ತಿದ್ದು, ಈ ನಿಟ್ಟಿನಲ್ಲಿ ನಾಲ್ಕು ನಿಗಮದ ಬಸ್​​ಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರ ಉಚಿತ ಪ್ರಯಾಣದ ವೇಳೆ ಪ್ರತಿ ಬಾರಿಯ ಕಿರಿಕಿರಿ ತಪ್ಪಿಸುವ ಸಲುವಾಗಿ ಟ್ಯಾಪ್ ಆ್ಯಂಡ್ ಟ್ರಾವೆಲ್ ತಂತ್ರಜ್ಞಾನದ ಸ್ಮಾರ್ಟ್ ಕಾರ್ಡ್ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಂತಿಸಿದೆ.

ಸದ್ಯ ಬಸ್​ಗಳಲ್ಲಿ ಮಹಿಳೆಯರು ಆಧಾರ್ ಕಾರ್ಡ್ ಮತ್ತು ಇತರೆ ದಾಖಲೆಗಳನ್ನು ತೋರಿಸಿ ಉಚಿತವಾಗಿ ಸಂಚರಿಸುತ್ತಿದ್ದಾರೆ. ಆದ್ರೆ ಬಸ್ ಕಿಕ್ಕಿರಿದು ತುಂಬಿದಾಗ ದಾಖಲೆ ಪರಿಶೀಲನೆ ಕಷ್ಟವಾಗುತ್ತಿದೆ. ಹೀಗಾಗಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಇದರಿಂದ ನಿರ್ವಾಹಕರಿಗೆ ಟಿಕೆಟ್ ನೀಡುವುದು ಸುಲಭವಾಗಲಿದೆ.

ನಮ್ಮ ಮೆಟ್ರೋ ಮಾದರಿ:ನಮ್ಮ ಮೆಟ್ರೊ ರೈಲು ಸೇವೆಯಲ್ಲಿನ ಟ್ಯಾಪ್ ಆ್ಯಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲೇ ಶಕ್ತಿ ಯೋಜನೆಗೂ ಸ್ಮಾರ್ಟ್ ಕಾರ್ಡ್ ನೀಡಲು ಯೋಜನೆ ಹಾಕಲಾಗಿದೆ. ಮಹಿಳೆಯರು ಬಸ್ ಹತ್ತುವಾಗ ಬಾಗಿಲಲ್ಲಿ ಅಳವಡಿಸುವ ಯಂತ್ರಕ್ಕೆ ಸ್ಮಾರ್ಟ್ ಕಾರ್ಡ್ ಟ್ಯಾಪ್ ಮಾಡಿ ನಂತರ ಇಳಿಯುವಾಗ ಮತ್ತೊಮ್ಮೆ ಟ್ಯಾಪ್ ಮಾಡಬೇಕಿದೆ. ಆಗ ಮಹಿಳಾ ಪ್ರಯಾಣಿಕರು ಎಲ್ಲಿಂದ, ಎಲ್ಲಿಗೆ ಪ್ರಯಾಣಿಸಿದರು ಎಂಬ ನಿಖರ ಮಾಹಿತಿ ಪಡೆಯಬಹುದು.

ಪ್ರತಿ ಸ್ಮಾರ್ಟ್ ಕಾರ್ಡ್​ಗೆ 30 ರೂಪಾಯಿ ವೆಚ್ಚ: ಟ್ಯಾಪ್ ಆ್ಯಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ನೀಡುವುದರಿಂದ ನಿಗಮದ ಮೇಲಾಗುವ ಆರ್ಥಿಕ ಹೊರೆಯ ಬಗ್ಗೆಯೂ ಗಮನಹರಿಸಬೇಕಾಗಿದ್ದು, ಪ್ರತಿ ಸ್ಮಾರ್ಟ್ ಕಾರ್ಡ್‌ಗೆ ಕನಿಷ್ಟ 20-30 ರೂಪಾಯಿ ತಗುಲಲಿದೆ. ಆದ್ದರಿಂದ ಸ್ಮಾರ್ಟ್ ಕಾರ್ಡ್‌ಗಾಗಿಯೇ 20 ಕೋಟಿಗೂ ಅಧಿಕ ಹಣ ವೆಚ್ಚವಾಗಲಿದೆ.

ಪ್ರತಿ ಯಂತ್ರಕ್ಕೆ 6 ಸಾವಿರ ರೂಪಾಯಿ ಖರ್ಚು:ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿನ 14 ಸಾವಿರಕ್ಕೂ ಅಧಿಕ ಸಾಮಾನ್ಯ ಸಾರಿಗೆ ಬಸ್‌ಗಳಿಗೆ ಸ್ಮಾರ್ಟ್ ಕಾರ್ಡ್ ಟ್ಯಾಪ್‌ಗೆ ಅಗತ್ಯವಾದ ಯಂತ್ರವನ್ನು ಅಳವಡಿಸಬೇಕಿದೆ. ಪ್ರತಿಯಂತ್ರಕ್ಕೆ ಕನಿಷ್ಠ 5 ರಿಂದ 6 ಸಾವಿರ ರೂಪಾಯಿ ವೆಚ್ಚವಾಗಲಿದೆ. ಬಿಎಂಟಿಸಿಯ ಹಾಗೂ ವಿವಿಧ ಮಹಾನಗರಗಳ ಸಾರಿಗೆ ಬಸ್‌ಗಳು ಎರಡು ದ್ವಾರಗಳನ್ನು ಹೊಂದಿವೆ. ಆ ಎರಡೂ ದ್ವಾರಕ್ಕೂ ಯಂತ್ರ ಅಳವಡಿಸಬೇಕಿದೆ. ಹೀಗೆ ಯಂತ್ರ ಅಳವಡಿಕೆಗಾಗಿಯೇ 15 ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚ ಮಾಡಬೇಕಾಗಿದೆ.

ಕೆಎಸ್​ಆರ್​ಟಿಸಿ ಎಂಡಿ ಪ್ರತಿಕ್ರಿಯೆ: "ಸದ್ಯಕ್ಕೆ ಮಾಮೂಲಿ ಗುರುತಿನ ಚೀಟಿ ನೀಡಿ, ಮುಂದೆ ಸರ್ಕಾರದ ಅನುದಾನ ಪಡೆದು ಅಥವಾ ನಿಗಮಗಳ ಆರ್ಥಿಕ ಪರಿಸ್ಥಿತಿ ಬಲಗೊಂಡ ನಂತರ ಟ್ಯಾಪ್ ಆ್ಯಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ" ಎಂದು ಕೆಎಸ್​ಆರ್​ಟಿಸಿ ಎಂಡಿ ಅನ್ಬುಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: Congress Guarantee: ತಿಂಗಳು ಪೂರೈಸಿದ ಶಕ್ತಿ ಯೋಜನೆ: ವಾಯವ್ಯ ಸಾರಿಗೆ ಬಸ್​ಗಳಲ್ಲಿ 4.02 ಕೋಟಿ ಮಹಿಳಾ ಪ್ರಯಾಣಿಕರ ಸಂಚಾರ..

ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಅಂತೆಯೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಜೂನ್ 11 ರಂದು ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿದೆ. ರಾಜ್ಯಾದ್ಯಂತ ಬಸ್​ಗಳಲ್ಲಿ ಮಹಿಳೆಯರು ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ರಾಜ್ಯದ ಮಹಿಳೆಯರಿಗೆ ಮಾತ್ರ ಶಕ್ತಿ ಯೋಜನೆ ಅನ್ವಯವಾಗುತ್ತಿದ್ದು, ಬೇರೆ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಇದು ಅನ್ವಯವಾಗಲ್ಲ.

ಇದನ್ನೂ ಓದಿ: ಶಕ್ತಿ ಯೋಜನೆ ಸಕ್ಸಸ್.. ತಿಂಗಳಲ್ಲೇ 16.73 ಕೋಟಿ ಮಹಿಳೆಯರು ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹರ್ಷ

ABOUT THE AUTHOR

...view details