ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾರಿಗೆಗಳಲ್ಲಿ ಮಕ್ಕಳಿಗೆ ಆರು ವರ್ಷದ ತನಕ ಉಚಿತವಾಗಿ ಪ್ರಯಾಣಿಸಲು ಅವಕಾಶ ಇದೆ. ಹಾಗೇ ಆರು ವರ್ಷದಿಂದ ಮೇಲ್ಪಟ್ಟು 12 ವರ್ಷಗಳವರೆಗೆ ಅರ್ಧ ಟಿಕೆಟ್( ಆಫ್ ಟಿಕೆಟ್) ಪಡೆದು ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆದರೆ ಮಕ್ಕಳಿಗೆ ಟಿಕೆಟ್ ಪಡೆಯುವಾಗ ಮಕ್ಕಳ ಪಾಲಕ/ಪೋಷಕರಿಗೆ ಹಾಗೂ ಕಂಡಕ್ಟರ್ ಮಧ್ಯೆ ವಾದ ವಿವಾದಗಳು ನಡೆಯೋದು ಮಾಮೂಲಿ ಆಗಿಬಿಟ್ಟಿದೆ.
ಈಗಾಗಲೇ ಸಾರಿಗೆ ನಿಗಮದಲ್ಲಿ ಮಕ್ಕಳಿಗೆ ಪ್ರಯಾಣ ದರ ವಿಧಿಸುವಾಗ ವಯಸ್ಸಿನ ಜೊತೆಗೆ ಎತ್ತರವನ್ನು ಅಳತೆಗೋಲಾಗಿ ಇಟ್ಟುಕೊಳ್ಳುವಂತೆ ಆದೇಶಿಸಲಾಗಿತ್ತು. ಅದರಂತೆ, ನಿಗಮದ ವಾಹನಗಳಲ್ಲಿ ಎತ್ತರವನ್ನು ಗುರುತಿಸಲಾಗಿದೆ.
ಇದನ್ನು ಓದಿ-ಮಕ್ಕಳ ವಯಸ್ಸು ಪತ್ತೆಗೆ ಸಾರಿಗೆ ಇಲಾಖೆ ಹೊಸ ಪ್ಲಾನ್.. ಬಸ್ನಲ್ಲಿ ಇನ್ಮುಂದೆ ನೂತನ ಮಾನದಂಡ
ಇಷ್ಟೆಲ್ಲ ಆದರೂ, ಅಳತೆಗೋಲನ್ನು ಎಲ್ಲ ಮಕ್ಕಳಿಗೂ ಸರ್ವೆ ಸಾಮಾನ್ಯವಾಗಿ ಉಪಯೋಗಿಸುತ್ತಿರುವುದಾಗಿ ಹಲವಾರು ದೂರುಗಳು, ವರದಿಗಳು ಬರುತ್ತಿದೆ. ಹಾಗೇ ಕೆಲ ಮಕ್ಕಳು ತಮ್ಮ ವಯಸ್ಸಿಗೂ ಮೀರಿ ಎತ್ತರವಾಗಿ ಇರುವುದರಿಂದ ಇದು ಪೋಷಕರು ಹಾಗೂ ಕಂಡಕ್ಟರ್ ಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗುತ್ತಿದೆ. ಹೀಗಾಗಿ ಇದಕ್ಕೆ ಬ್ರೇಕ್ ಹಾಕಲು ನಿಗಮ ಮುಂದಾಗಿದ್ದು, ಕೆಲ ಅಂಶಗಳ ಕುರಿತು ಸ್ಪಷ್ಟೀಕರಣ ಕೊಟ್ಟು ಹೊಸ ಆದೇಶ ಹೊರಡಿಸಿದೆ.
- ಮಕ್ಕಳ ವಯಸ್ಸಿನ ಬಗ್ಗೆ ಅಧಿಕೃತ ದಾಖಲಾತಿಗಳನ್ನು ( ಐಡಿ ಫ್ರೂಫ್) ತೋರಿಸಿದಾಗ ಆಳತೆಗೋಲು ಉಪಯೋಗಿಸುವಂತಿಲ್ಲ.
- ಮಕ್ಕಳ ವಯಸ್ಸಿನ ಬಗ್ಗೆ ಪಾಲಕ, ಪೋಷಕರು ಹಾಗೂ ನಿರ್ವಾಹಕರ ಮಧ್ಯೆ ಭಿನ್ನಾಭಿಪ್ರಾಯವಿದ್ದಲ್ಲಿ ಅಳತೆಗೋಲನ್ನು ಉಪಯೋಗಿಸಬಹುದು.
- ಎಲ್ಲಾ ಮಕ್ಕಳಿಗೆ ಆಳತೆಗೋಲು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ.
ಈ ವಿಚಾರವನ್ನ ಎಲ್ಲ ಚಾಲನಾ ಸಿಬ್ಬಂದಿಗೆ ಸೂಕ್ತವಾಗಿ ತಿಳಿವಳಿಕೆ ನೀಡುವಂತೆ ಆದೇಶಿಸಲಾಗಿದೆ. ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.