ಬೆಂಗಳೂರು: ಕೆಎಸ್ಆರ್ಟಿಸಿ ವಾಹನಗಳು ಸಂಚಾರಿಸುವಾಗ ದಿಢೀರ್ ಭೇಟಿ ನೀಡಿ ಟಿಕೆಟ್ ಪರಿಶೀಲನೆ ನಡೆಸುತ್ತಿದ್ದ ಅಧಿಕಾರಿಗಳು ಈಗ ಅನಿರೀಕ್ಷಿತ ಹೊಗೆ ತಪಾಸಣೆ ಮಾಡುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೂ ಮುಂದಾಗಿದೆ.
ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಅನಿರೀಕ್ಷಿತ ಹೊಗೆ ತಪಾಸಣೆ ನಡೆಸುವ ನೂತನ ಪ್ರಕೃತಿ ವಾಹನಕ್ಕೆ ಶಾಂತಿನಗರದಲ್ಲಿರುವ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಚಾಲನೆ ನೀಡಿದರು.
ಈ ವಾಹನವು ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುವ ಮಾರ್ಗದಲ್ಲಿ ತೆರಳಿ, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳು ಹೊರಸೂಸುವ ಹೊಗೆ ಹಾಗು ಶಬ್ದ ತಪಾಸಣೆ ನಡೆಸಲಿದೆ. ಲೋಪದೋಷಗಳು ಕಂಡುಬಂದಲ್ಲಿ ಕೂಡಲೇ ಅವುಗಳ ದುರಸ್ತಿಗೆ ಶಿಫಾರಸ್ಸು ಮಾಡಲಿದೆ.
ಹೊಗೆ ತಪಾಸಣೆ ಯಂತ್ರವು ಹಲವು ಸಂಕೀರ್ಣ ಸೌಲಭ್ಯಗಳುಳ್ಳ ಏಕೈಕ ಯಂತ್ರವಾಗಿದೆ. ಎಲ್ಇಡಿ ರಿಮೋಟ್ ಕಂಟ್ರೋಲ್, ಯುಎಸ್ಇ ಇಂಟರ್ ಫೇಸ್ಗಳನ್ನು ಗಣಕಯಂತ್ರಕ್ಕೆ ಸಂಪರ್ಕಿಸಲು ಸೌಲಭ್ಯ ಕಲ್ಪಿಸಲಾಗಿದೆ. ಆಟೋಮೆಟಿಕ್ ಜೀರೋ ಕ್ಯಾಲಿಬ್ರೇಷನ್ ಸೌಲಭ್ಯದೊಂದಿಗೆ ಪ್ರತಿ ಆಕ್ಸಿಲರೇಷನ್ ಪರೀಕ್ಷೆ ಮಾಡುವಾಗಲೂ ಸಹ ಕಾರ್ಯೋನ್ಮುಖವಾಗುತ್ತದೆ.
ಈ ಯಂತ್ರವು 230 ವೋಲ್ಟ್ಸ್ ಎಸಿಯಲ್ಲಿ ಹಾಗು 10-36 ವೋಲ್ಟ್ಸ್ ಡಿಸಿ ಪವರ್ನಲ್ಲಿ ಯಲ್ಲಿ ಕಾರ್ಯನಿರ್ವಹಿಸಲಿದೆ. ಹೊಗೆ ಪರೀಕ್ಷಣಾ ಯಂತ್ರವು 400-4500 ಆರ್.ಪಿ.ಎಂ ಉಳ್ಳ ಸಿಆರ್ಡಿಐ ಮತ್ತು ಡಿಡಿಐಎಸ್ ವಾಹನಗಳನ್ನು ಪರೀಕ್ಷಿಸಲು ಅನುಕೂಲವಾಗುವಂತಹ ಮ್ಯಾಗ್ನೆಟಿಕ್ ಸೆನ್ಸಾರ್ ಹೊಂದಿದೆ.