ಬೆಂಗಳೂರು: ನಿತ್ಯ ಯಾವುದೇ ಅಡ್ಡಿ ಆತಂಕವಿಲ್ಲದೇ ಲಕ್ಷಾಂತರ ಪ್ರಯಾಣಿಕರನ್ನ ಹೊತ್ತೊಯ್ಯುತ್ತಿದ್ದ ಕೆಎಸ್ಆರ್ಟಿಸಿ ನಿಗಮಕ್ಕೆ ಬ್ರೇಕ್ ಹಾಕಿದ್ದು, ಕೊರೊನಾ ಪ್ರೇರಿತ ಲಾಕ್ಡೌನ್. ಹೀಗಾಗಿ ಅಂತಾರಾಜ್ಯ ಹಾಗೂ ಅಂತರ್ಜಿಲ್ಲೆ ಸಂಚಾರ ನಿರ್ಬಂಧ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಬಸ್ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧ ತೆರವು ಮಾಡಿದ ಹಿನ್ನೆಲೆಯಲ್ಲಿ ಇದೀಗ ಅಂತಾರಾಜ್ಯ ಸಾರಿಗೆ ಓಡಾಟ ಪುನಾರಂಭವಾಗಿದೆ.
ಅಂತಾರಾಜ್ಯ ಸಾರಿಗೆ ಸೇವೆ ಪುನಾರಂಭ: ತಮಿಳುನಾಡು ಸಂಚಾರಕ್ಕಿಲ್ಲ ಅನುಮತಿ
ಕರ್ನಾಟಕದ ನೆರೆಯ 6 ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗೋವಾ, ತೆಲಂಗಾಣ ಮತ್ತು ಪಾಂಡಿಚೇರಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.
ರಾಜ್ಯದಿಂದ ನೆರೆಯ 6 ರಾಜ್ಯಗಳಿಗೆ ಕೆಎಸ್ಆರ್ಟಿಸಿ ಬಸ್ಗಳು ಓಡಾಟ ನಡೆಸುತ್ತವೆ. ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗೋವಾ, ತೆಲಂಗಾಣ ಮತ್ತು ಪಾಂಡಿಚೇರಿಗೆ ಕಾರ್ಯಾಚರಣೆ ನಡೆಸಲಾಗುತ್ತದೆ. ಸುಮಾರು 1070 ಬಸ್ಗಳು ಕರ್ನಾಟಕದಿಂದ ಅಂತಾರಾಜ್ಯಕ್ಕೆ ಸಂಚಾರ ಮಾಡಲಿದೆ. ಅಕ್ಟೋಬರ್ ತಿಂಗಳಿನಿಂದ ಸೇವೆ ಪ್ರಾರಂಭವಾಗಲಿದೆ.
ಕೇಂದ್ರ ಸರ್ಕಾರ ಈಗಾಗಲೇ ಅಂತಾರಾಜ್ಯ ಬಸ್ ಸಂಚಾರಕ್ಕೆ ಇದ್ದ ಅಡೆತಡೆಯನ್ನು ತೆರವುಗೊಳಿಸಿದೆ. ಹಲವು ನೆರೆಯ ರಾಜ್ಯಗಳಿಗೆ ಬಸ್ ಸಂಚಾರ ಮಾಡಲು ಹಸಿರು ನಿಶಾನೆ ತೋರಿವೆ. ಆದರೆ ತಮಿಳುನಾಡಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಕಾರಣ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಹೀಗಾಗಿ ಕಾರ್ಯಾಚರಣೆ ಮಾಡಲು ಅಲ್ಲಿನ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿರುವ ನಿಗಮದ ಅಧಿಕಾರಿಗಳು ಸಾಕಷ್ಟು ಸಲ ಪತ್ರದ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಜಿ. ಟಿ ಪ್ರಭಾಕರ್ ರೆಡ್ಡಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.