ಬೆಂಗಳೂರು : ಇನ್ಮುಂದೆ ಕೆಎಸ್ಆರ್ಟಿಸಿಯ ಕೆಂಪು ಬಣ್ಣದ ಬಸ್ಗಳಲ್ಲಿ ಪ್ರಯಾಸದ ಪ್ರಯಾಣಕ್ಕೆ ಗುಡ್ ಬೈ ಹೇಳಿ ಆರಾಮದಾಯಕ ಅನುಭವದ ಪ್ರಯಾಣ ಮಾಡಬಹುದಾಗಿದೆ. ಪುಷ್ ಬ್ಯಾಕ್ ಹೊರತುಪಡಿಸಿ ಬಹುತೇಕ ರಾಜಹಂಸ ಬಸ್ ಪ್ರಯಾಣದ ಅನುಭವ ನೀಡುವ ವ್ಯವಸ್ಥೆಯನ್ನು ಸಾಮಾನ್ಯ ಸಾರಿಗೆಯಲ್ಲಿ ನೀಡಲು ಸಂಸ್ಥೆ ಸಿದ್ಧತೆ ಆರಂಭಿಸಿದೆ. ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಂಡ ಪ್ರೋಟೋಟೈಪ್ ಬಸ್ಗಳು ಅಕ್ಟೋಬರ್ ವೇಳೆಗೆ ರಸ್ತೆಗಿಳಿಯಲಿವೆ.
ಹತ್ತು ಹಲವು ಪ್ರಯೋಗಗಳ ಮೂಲಕ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅತ್ಯುತ್ತಮ ಸ್ಥಿತಿಯಲ್ಲಿರುವ ಸಾಮಾನ್ಯ ಬಸ್ (ಕೆಂಪುಬಣ್ಣದ ಬಸ್)ಗಳನ್ನು ಓಡಿಸುತ್ತಿದೆ. ಇತರ ರಾಜ್ಯಗಳ ಸಾಮಾನ್ಯ ಸಾರಿಗೆ ಬಸ್ಗಳಿಗೆ ಹೋಲಿಸಿದಲ್ಲಿ ಕೆಎಸ್ಆರ್ಟಿಸಿ ಸಾಮಾನ್ಯ ಸಾರಿಗೆ ಬಸ್ ಗಳ ಸ್ಥಿತಿ ಅತ್ಯುತ್ತಮವಾಗಿದೆ. ಆದರೂ ಈಗ ಮತ್ತೊಂದು ಹಂತ ಮುಂದೆ ಹೋಗಲು ನಿರ್ಧರಿಸಿದೆ. ಸಾಮಾನ್ಯ ಸಾರಿಗೆ ಬಸ್ಗಳನ್ನು ಪ್ರೋಟೋಟೈಪ್ ವಾಹನಗಳನ್ನಾಗಿ ವಿನ್ಯಾಸ ಮಾಡುತ್ತಿದ್ದು, ಐಷಾರಾಮಿ ಪ್ರಯಾಣದ ಅನುಭವ ಪ್ರಯಾಣಿಕರಿಗೆ ಸಾಮಾನ್ಯ ಬಸ್ಗಳಲ್ಲೇ ಸಿಗುವಂತೆ ಮಾಡಲು ಮುಂದಾಗಿದೆ.
ಈಗಾಗಲೇ ಪಾಯಿಂಟ್ ಟು ಪಾಯಿಂಟ್ ಮತ್ತು ವೇಗಧೂತ ಕಾರ್ಯಾಚರಣೆಗೆ ನಿಯೋಜಿಸಲಾಗುವ ನೂತನ ಕರ್ನಾಟಕ ಸಾರಿಗೆ ವಾಹನದ ಪ್ರೋಟೋ ಟೈಪ್ ವಾಹನದ ಮಾದರಿ ಸಿದ್ಧವಾಗಿದ್ದು, ಹೊಸ ವಿನ್ಯಾಸದಲ್ಲಿ ಸಿದ್ಧಗೊಂಡಿರುವ ಹೊಸ ಬಸ್ ಅನ್ನು ನಿಗಮದ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿ ಸಣ್ಣಪುಟ್ಟ ಮಾರ್ಪಾಡಿನೊಂದಿಗೆ ಈ ಹೊಸ ವಿನ್ಯಾಸಕ್ಕೆ ಒಪ್ಪಿಗೆ ನೀಡಿದ್ದಾರೆ. ಹಾಗಾಗಿ ಇನ್ನೊಂದು ತಿಂಗಳಿನಲ್ಲಿ ರಾಜ್ಯದಲ್ಲಿ ಪ್ರೋಟೋಟೈಪ್ ಬಸ್ಗಳ ಸಂಚಾರ ಆರಂಭವಾಗಲಿದೆ. ಖಾಸಗಿ ಬಸ್ಗಳಿಗೆ ಈ ಹೊಸ ಕೆಂಪು ಬಣ್ಣದ ಬಸ್ಗಳು ಸ್ಪರ್ಧೆ ನೀಡಲಿವೆ.
ನೂತನ ಬಸ್ ವಿಶೇಷತೆಗಳೇನು? : ನೂತನವಾಗಿ ಕಾರ್ಯಾಚರಣೆಗೆ ನಿಯೋಜಿಸಲಾಗುವ ಕರ್ನಾಟಕ ಸಾರಿಗೆ ವಾಹನಗಳನ್ನು ಮೆ.ಕೆ.ಎಂ.ಎಸ್. ಕೋಚ್ ಬಿಲ್ಡರ್ಸ ನಿರ್ಮಾಣ ಮಾಡುತ್ತಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ. ಈ ಹೊಸ ವಿನ್ಯಾಸದ ಬಸ್ನ ಎತ್ತರ 3420 ಮಿ.ಮೀ ಆಗಿದ್ದು 3+2 ಮಾದರಿಯ 52 ಆಸನಗಳ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕರ ಆಸನ ಬಕೆಟ್ ಟೈಪ್ ಮಾದರಿಯಲ್ಲಿ ನಿರ್ಮಿಸಿದ್ದು, ಕಾಲುಗಳನ್ನು ಇರಿಸಿಕೊಳ್ಳಲು ಲೆಗ್ ಸ್ಪೇಸ್ ಹೆಚ್ಚಿಸಲಾಗಿದೆ. ನೀರಿನ ಬಾಟಲ್ ಹಾಗು ಮ್ಯಾಗಜಿನ್ ಇರಿಸಿಕೊಳ್ಳಲು ಕೂಡ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಪ್ರಯಾಣಿಕರಿಗೆ ರಾಜಹಂಸ ಬಸ್ನಲ್ಲಿ ಕುಳಿತ ಅನುಭವ ನೀಡಲಿದೆ.