ಬೆಂಗಳೂರು :ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ ಪಡೆದ ಬೆನ್ನಲ್ಲೇ ಕೆಎಸ್ಆರ್ಟಿಸಿ ಮುಡಿಗೆ ಮತ್ತೆ ನಾಲ್ಕು ಪ್ರಶಸ್ತಿಗಳು ಲಭಿಸಿವೆ. ಈ ಪ್ರಶಸ್ತಿಗಳನ್ನು ನಿಗಮದ ಸಮಸ್ತ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಸಮರ್ಪಿಸುವ ಮೂಲಕ ಪ್ರಶಸ್ತಿಯ ಗೌರವವನ್ನು ಹೆಚ್ಚುವಂತೆ ಮಾಡಿದೆ.
ವಿ ಕನೆಕ್ಟ್ ಇಂಡಿಯಾ ಮೀಡಿಯಾ ಅಂಡ್ ರಿಸರ್ಚ್ನಿಂದ ಕೊಡಲಾಗುವ ಏಷ್ಯಾದ ಬ್ಯುಸಿನೆಸ್ ಕ್ವಾಲಿಟಿ ಪ್ರಶಸ್ತಿಗಳಲ್ಲಿ ನಾಲ್ಕು ವರ್ಗದಲ್ಲಿ ಕೆಎಸ್ಆರ್‌ಟಿಸಿಗೆ ಪ್ರಶಸ್ತಿಗಳು ಬಂದಿವೆ. ಕಾರ್ಮಿಕ ಕಲ್ಯಾಣ ಉಪಕ್ರಮದ ಉತ್ಕೃಷ್ಟ ಸಾಧನೆಗೆ, ಸಾರಿಗೆ ಸುರಕ್ಷತಾ ಕ್ಷೇತ್ರದಲ್ಲಿ ಅತ್ಯುನ್ನತ ಕಾರ್ಯಸಾಧನೆಗೆ, ಅತ್ಯುನ್ನತ ಬ್ರ್ಯಾಂಡಿಂಗ್ & ಮಾರ್ಕೆಟಿಂಗ್, ಅತ್ಯುನ್ನತ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗಾಗಿ ಕೆಎಸ್ಆರ್ಟಿಸಿ ಪ್ರಶಸ್ತಿ ಪಡೆದುಕೊಂಡಿದೆ. ಈ ಪ್ರಶಸ್ತಿಗಳನ್ನು ನಿಗಮದ ಸಮಸ್ತ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಸಮರ್ಪಿಸುವ ಮೂಲಕ ಸಿಬ್ಬಂದಿ ಹಾಗು ಪ್ರಯಾಣಿಕರಿಗೆ ಗೌರವ ಸಲ್ಲಿಕೆ ಮಾಡಿದೆ.
ಕೆಎಸ್ಆರ್ಟಿಸಿ ಮುಡಿಗೆ ಮತ್ತೆ ನಾಲ್ಕು ಪ್ರಶಸ್ತಿ ಈ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 29ರಂದು ದೆಹಲಿಯ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ಉಪಸ್ಥಿತರಿರಲಿದ್ದಾರೆ.
ಗ್ರೀನ್ ಟೆಕ್ ಪ್ರಶಸ್ತಿ: ಕೆಎಸ್ಆರ್‌ಟಿಸಿಗೆ ಮಾನವ ಸಂಪನ್ಮೂಲ ವರ್ಗದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ಪರಿವರ್ತಿತ ಕಾರ್ಯಸಾಧನೆಗೆ ಗ್ರೀನ್ ಟೆಕ್ ಫೌಂಡೇಷನ್ ಅವರು ಕೊಡಮಾಡುವ ಗ್ರೀನ್ ಟೆಕ್ ಹೆಚ್. ಆರ್ ಪ್ರಶಸ್ತಿ ಲಭಿಸಿತ್ತು. ಆಗಸ್ಟ್ 21 ರಂದು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಇರುವ ಹೋಟೆಲ್ ರಾಡಿಸನ್ ಬ್ಲೂ ಪ್ಲಾಜಾ ದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಅಸ್ಸೋಂ ಮಾಜಿ ರಾಜ್ಯಪಾಲ ಪ್ರೊ. ಜಗದೀಶ್ ಮುಖಿ ಹಾಗೂ ಗ್ರೀನ್ ಟೆಕ್ ಫೌಂಡೇಷನ್ ಅಧ್ಯಕ್ಷ ಮತ್ತು ಸಿಇಒ ಕಮಲೇಶ್ವರ್ ಶರಣ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು. ನಿಗಮದ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಹೆಚ್.ಡಿ. ಗೌರಾಂಭ, ಹಾಗೂ ಉಪ ಮುಖ್ಯ ಗಣಕ ವ್ಯವಸ್ಥಾಪಕ ಹೆಚ್. ಗುರುರಾಜ್ ಅವರು ನಿಗಮದ ಪರವಾಗಿ ಪ್ರಶಸ್ತಿ ಸ್ವೀಕಾರ ಮಾಡಿದ್ದರು.
ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ :ಕೆಎಸ್ಆರ್‌ಟಿಸಿಗೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಎಂಬ ಪ್ರಶಸ್ತಿ ಲಭಿಸಿತ್ತು. ಸಿಂಗಾಪುರದ ವಿಶ್ವ ಸುಸ್ಥಿರ ಕಾಂಗ್ರೆಸ್ ನೀಡುವ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ 2023ನೇ ಸಾಲಿನ 14ನೇ ಆವೃತ್ತಿಯ 18ನೇ ಪ್ರಶಸ್ತಿಗೆ ನಿಗಮವು ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಆಯ್ಕೆಯಾಗಿತ್ತು. ಸಿಂಗಾಪುರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮದ ಪರವಾಗಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರ್ತಿ ಮಂಜುಳ ನಾಯ್ಕ್, ಮಂಡಳಿ ಕಾರ್ಯದರ್ಶಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್ ಪ್ರಶಸ್ತಿ ಸ್ವೀಕರಿಸಿದ್ದರು.
ಇದನ್ನೂ ಓದಿ :KSRTCಗೆ 'ಏಷ್ಯಾದ ಅತ್ಯುತ್ತಮ ಉದ್ಯೋಗದಾತ' ಬ್ರ್ಯಾಂಡ್ ಪ್ರಶಸ್ತಿ