ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಉಚಿತ ಅಥವಾ ರಿಯಾಯಿತಿ ದರದ ಪಾಸ್ ಗಳನ್ನು ಆನ್ಲೈನ್ ಮುಖಾಂತರ ನೀಡುತ್ತಿದೆ. ಹೀಗಾಗಿ, ಮುಂದಿನ ತಿಂಗಳು ಸೆ.15ರೊಳಗೆ ಅರ್ಜಿ ಸಲ್ಲಿಸಲು ಕೋರಿದೆ. ಅಲ್ಲಿಯವರೆಗೆ ಹಳೆಯ ಪಾಸ್ ಅಥವಾ ಶಾಲಾ ಕಾಲೇಜಿನ ಗುರುತಿನ ಚೀಟಿ ಬಳಸಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಕೆಎಸ್ಆರ್ಟಿಸಿ ಸಂಸ್ಥೆ ತಿಳಿಸಿದೆ.
9ನೇ ತರಗತಿಯಿಂದ 12 ನೆಯ ತರಗತಿಯವರೆಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಭೌತಿಕ ತರಗತಿಗಳು ಪ್ರಾರಂಭವಾಗಿದೆ. ಸಾರಿಗೆ ನಿಗಮದ ವತಿಯಿಂದ ವಿದ್ಯಾರ್ಥಿ ಹಳೆಯ ಬಸ್ ಪಾಸ್ಗಳನ್ನು ಬಳಸಿ ಆಗಸ್ಟ್ 2021ರ ಅಂತ್ಯದವರೆಗೆ ಪ್ರಯಾಣಿಸಲು ಈ ಹಿಂದೆ ಅನುಮತಿಸಲಾಗಿತ್ತು. ಪ್ರಸಕ್ತ ವರ್ಷವೂ ಸಹ ಎಲ್ಲಾ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮುಖಾಂತರ ಬಸ್ ಪಾಸ್ಗಳನ್ನು ಪಡೆಯಬೇಕಿದ್ದು, ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಸಾರಿಗೆ ಸಂಸ್ಥೆ ಹೇಳಿದೆ.
ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬೇಕು: ಪಾಸ್ ವಿತರಣೆಯ ತಂತ್ರಾಂಶವನ್ನು ಸಂಪೂರ್ಣ ಆನ್ಲೈನ್ ಮಾಡಿರುವುದರಿಂದ, ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡಲಾಗಿದೆ. 2020-21 ಸಾಲಿನಲ್ಲಿ ಪಡೆದಿರುವ ವಿದ್ಯಾರ್ಥಿ ಬಸ್ ಪಾಸ್ಗಳನ್ನು ಬಳಸಿ ಪ್ರಯಾಣಿಸಲು ಹಾಗೂ ಕಳೆದ ಸಾಲಿನಲ್ಲಿ ಪಾಸ್ಗಳನ್ನು ಪಡೆಯದಿರುವ ವಿದ್ಯಾರ್ಥಿಗಳು ಹೊಸದಾಗಿ ಶಾಲೆ ಅಥವಾ ಕಾಲೇಜುಗಳಲ್ಲಿ ಪಾವತಿಸಿರುವ ರಶೀದಿ ಹಾಗೂ ವಿದ್ಯಾಸಂಸ್ಥೆಯ ಗುರುತಿನ ಚೀಟಿಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.