ಬೆಂಗಳೂರು: ಮುಷ್ಕರ ನಡೆಸಿದ್ದಕ್ಕಾಗಿ ಸಾವಿರಾರು ಸಾರಿಗೆ ನೌಕರರ ವಿರುದ್ಧ ಹೊರಡಿಸಿದ್ದ ಅಮಾನತು ಆದೇಶಗಳನ್ನು ರದ್ದುಪಡಿಸಲಾಗಿದೆ ಹಾಗೂ ಹಲವರ ವರ್ಗಾವಣೆ ಆದೇಶಗಳನ್ನು ಹಿಂಪಡೆಯಲಾಗಿದೆ ಎಂದು ಸಾರಿಗೆ ನಿಗಮ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಸಾರಿಗೆ ನೌಕರರ ಮುಷ್ಕರ ತಡೆಯಲು ಹಾಗೂ ಮುಷ್ಕರದಿಂದ ಉಂಟಾಗಿರುವ ನಷ್ಟ ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ "ಸಮರ್ಪಣಾ' ಸ್ವಯಂ ಸೇವಾ ಸಂಸ್ಥೆ, ವಕೀಲ ನಟರಾಜ್ ಶರ್ಮಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ನಿಗಮಗಳ ಪರ ವಕೀಲರಾದ ಎಚ್.ಆರ್ ರೇಣುಕಾ ಮೆಮೋ ಸಲ್ಲಿಸಿ, ಹೈಕೋರ್ಟ್ ಸೂಚನೆ ಮೇರೆಗೆ ಮೇ 3ರಂದು ಸಾರಿಗೆ ನೌಕರರ ಸಂಟನೆಗಳೊಂದಿಗೆ ಸಭೆ ನಡೆಸಲಾಗಿದೆ. ಕೆಲ ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೆಲವೊಂದು ಬೇಡಿಕೆಗಳನ್ನು ಕೈಬಿಡಲಾಗಿದೆ. ಕೆಲ ನೌಕರರ ವರ್ಗಾವಣೆ ಆದೇಶ ಹಿಂಪಡೆಯಲಾಗಿದ್ದು, ಬಹುತೇಕರ ಅಮಾನತು ಆದೇಶಗಳನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.