ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿನ ಕೆಎಸ್ಆರ್ಟಿಸಿ ಚಾಲಕ ಕಂ ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿತು. ಆಡಳಿತ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸದಸ್ಯರ ನಡುವೆ ಏರು ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಇಡೀ ಸದನ ರಣರಂಗದಂತೆ ನಿರ್ಮಾಣವಾದ ಪ್ರಸಂಗ ನಡೆಯಿತು.
ಅಲ್ಲದೇ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಲ್ಲಿಯವರೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯ ಸ್ವಾಮಿ ರಾಜೀನಾಮೆ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ನಡೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದ ಘಟನೆಯೂ ಜರುಗಿತು.
ಕೆಎಸ್ ಆರ್ ಟಿಸಿ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ:ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಪರಸ್ಪರ ವಾದ, ವಾಗ್ವಾದ, ಆರೋಪ - ಪ್ರತ್ಯಾರೋಪ ಮಾಡಿದ್ದಲ್ಲದೇ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದರಿಂದ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಿತ್ತು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಗಮಂಗದಲ್ಲಿ ಕೆಎಸ್ಆರ್ಟಿಸಿಯ ಚಾಲಕ ಕಂ ನಿರ್ವಾಹಕ ಜಗದೀಶ್ ಅವರಿಗೆ ಮಾನಸಿಕ ಕಿರುಕುಳ ನೀಡಿ ವರ್ಗಾವಣೆ ಮಾಡಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಮೈಸೂರಿನ ಆಸ್ಪತ್ರೆಯೊಂದರಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆತ್ಮಹತ್ಯೆ ಯತ್ನಕ್ಕೂ ಮುನ್ನ ತನ್ನ ಈ ಸ್ಥಿತಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿದ್ದಾರೆ. ಈ ಬಗ್ಗೆ ಇದುವರೆಗೂ ಎಫ್ ಐಆರ್ ಹಾಕಿಲ್ಲ. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖೆ ಮುಗಿಯುವವರೆಗೂ ಚಲುವರಾಯಸ್ವಾಮಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ವಿಚಾರ ಕುರಿತಂತೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ನೀಡುವಂತೆ ನೋಟಿಸ್ ನೀಡಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರಿಗೂ ಇದೇ ವೇಳೆ, ವಿಷಯ ಪ್ರಸ್ತಾಪಿಸಲು ಸ್ಪೀಕರ್ ಅವಕಾಶ ನೀಡಿದರು. ಮಾತನಾಡಲು ಆರಂಭಿಸಿದ ಕುಮಾರಸ್ವಾಮಿ, ಇದೊಂದು ಗಂಭೀರ ಪ್ರಕರಣ. ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ನಮ್ಮ ಉದ್ದೇಶ ಅಲ್ಲ. ಸರ್ಕಾರ ರಚನೆಯಾಗಿ ಐವತ್ತು ದಿನಗಳಾಗಿಲ್ಲ. ಈಗ ಹೋಗುತ್ತಿರುವ ಸರ್ಕಾರ ಮುನ್ನಡೆದರೆ ಶೋಭೆ ತರುವುದಿಲ್ಲ. ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಗ್ರಾಮ ಪಂಚಾಯಿತಿ ಸದಸ್ಯರಿಗೆ ಬೆದರಿಕೆವೊಡ್ಡಿ ಆಡಳಿತ ಪಕ್ಷದವರು ಬೆಂಬಲ ಪಡೆಯಲು ಒತ್ತಡದ ರಾಜಕಾರಣ ಮಾಡುತ್ತಿದ್ದಾರೆ. ಚಾಲಕನ ಆತ್ಮಹತ್ಯೆ ಯತ್ನವೂ ಇದಕ್ಕೆ ಸಂಬಂಧಿಸಿದ್ದಾಗಿದೆ ಎಂದು ದೂರಿದರು.
ಚಾಲಕ ಜಗದೀಶ್ ಪತ್ನಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು, ಅವರ ಬೆಂಬಲ ಪಡೆಯುವ ಸಲುವಾಗಿ ಅವರ ಮೇಲೆ ಒತ್ತಡ ಹೇರಿದ್ದು, ಇದರ ಹಿನ್ನೆಲೆಯಲ್ಲಿ ಚಾಲಕನಿಗೆ ವರ್ಗಾವಣೆ ಬೆದರಿಕೆ ಒಡ್ಡಲಾಗಿದೆ. ಹೆಣ್ಣುಮಗಳ ಮೇಲೆ ಅನುಚಿತ ವರ್ತನೆ ಮಾಡಿದ ದೂರಿನ ಹಿನ್ನೆಲೆ ವರ್ಗಾವಣೆ ಮಾಡಲಾಗಿದೆ ಎಂಬ ಹೇಳಿಕೆಗಳಲ್ಲಿ ಸತ್ಯಾಂಶವಿಲ್ಲ. ಮೇಲ್ನೋಟಕ್ಕೆ ಇದು ಒತ್ತಡದ ರಾಜಕಾರಣವಾಗಿದೆ. ಈ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆದಿವೆ ಎಂದು ಕುಮಾರಸ್ವಾಮಿ ಅರೋಪಿಸಿದರು.
ದಿಕ್ಕು ತಪ್ಪಿದ ಚರ್ಚೆ, ಕಾವೇರಿದ ವಾತಾವರಣ : ಈ ಹಂತದಲ್ಲಿ ವಿಷಯ ರಾಜಕಾರಣದತ್ತ ತಿರುಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಡಿವೈಎಸ್ಪಿ ಗಣಪತಿ, ಕಲ್ಲಪ್ಪ ಹಂಡಿಭಾಗ್, ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣಗಳ ವಿಚಾರ ಸದನದಲ್ಲಿ ಪ್ರಸ್ತಾಪವಾಯಿತು.
ಹೆಚ್ ಡಿಕೆ ಸಚಿವ ಜಾರ್ಜ್ ಮಧ್ಯೆ ವಾಗ್ವಾದ : ಕುಮಾರಸ್ವಾಮಿಯವರು ಮಾತು ಮುಂದುವರಿಸಿ, ಸಚಿವರಾಗಿದ್ದ ಈಶ್ವರಪ್ಪ ಅವರ ಮೇಲೆ ಆರೋಪ ಹೊರಿಸಿ ವಾಟ್ಸಾಪ್ ಸಂದೇಶ ನೀಡಿದ್ದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ನವರು ಹೋರಾಟ ಮಾಡಿದ್ದರು. ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಎಂಬ ವ್ಯಕ್ತಿ ನಾಗಮಂಗಲದ ಶಾಸಕರ ಮೇಲೆ ಆರೋಪ ಹೊರಿಸಿ ನೋಟೊಂದನ್ನು ಬರೆದಿದ್ದಾರೆ ಎನ್ನುತ್ತಿದ್ದಂತೆ ಮಧ್ಯಪ್ರವೇಶಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಡಿವೈಎಸ್ಪಿ ಗಣಪತಿ, ಐಎಸ್ ಅಕಾರಿ ಡಿ.ಕೆ.ರವಿ ಪ್ರಕರಣವನ್ನು ನಾವು ಸಿಬಿಐಗೆ ವಹಿಸಿದ್ದೆವು.